ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ನೀಡಲಾಗಿದೆ.
ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು ₹8ಗೆ ಏರಿಕೆ ಮಾಡಲಾಗಿದೆ. ಇದರಲ್ಲಿ ₹7 ಹಾಲು ಉತ್ಪಾದಕರಿಗೆ ಹಾಗೂ ₹1 ಕೆಎಂಎಫ್ಗೆ ನೀಡಲಾಗುವುದು ಎಂದು ಸಂಪುಟ ಸಭೆಯ ಬಳಿಕ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ ಗೆ ₹ 8ರಿಂದ ₹10ರಷ್ಟು ಹೆಚ್ಚಿಸಲು ಕರ್ನಾಟಕ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕಳೆದ ತಿಂಗಳು ಮನವಿ ಸಲ್ಲಿಸಿತ್ತು.
ಯಾವ ರಾಜ್ಯದಲ್ಲಿ ಎಷ್ಟು?
ಕರ್ನಾಟಕದಲ್ಲಿ ಒಕ್ಕೂಟ ಉತ್ಪಾದಕರಿಂದ ಟೋನ್ಡ್ ಹಾಲನ್ನು ಲೀಟರಿಗೆ ₹ 35ಕ್ಕೆ ಖರೀದಿಸುತ್ತಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ ₹ 41.5, ಕೇರಳದಲ್ಲಿ ₹ 41.8, ಮಹಾರಾಷ್ಟ್ರದಲ್ಲಿ ₹ 41, ತಮಿಳುನಾಡಿನಲ್ಲಿ ₹ 42.24 ಕ್ಕೆ ಖರೀದಿಸಲಾಗುತ್ತಿದೆ. ಹಾಲಿನ ಗರಿಷ್ಠ ಮಾರಾಟ ದರದಲ್ಲಿ ಸಹ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಲೀಟರಿಗೆ ಕನಿಷ್ಠ ₹ 12 ರಷ್ಟು ಕಡಿಮೆಯಿತ್ತು ಎನ್ನುವುದು ಅಧಿಕಾರಿಗಳ ವಿವರಣೆ.