ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ತಂತ್ರಜ್ಞಾನ ಆಧಾರಿತ ಭಾರಿ ಬದಲಾವಣೆಯೊಂದನ್ನು ತರಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಜನೆಯ ದುರ್ಬಳಕೆ ಹಾಗೂ ಅನರ್ಹರ ಪಾಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ಮುಂದೆ ಒನ್-ಟೈಮ್ ಬಯೋಮೆಟ್ರಿಕ್ (One-Time Biometric) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಪ್ರಸ್ತುತ ಪ್ರತಿ ತಿಂಗಳು ₹2,೦೦೦ ಹಣ ಪಡೆಯುತ್ತಿರುವ ಎಲ್ಲಾ ಮಹಿಳಾ ಫಲಾನುಭವಿಗಳು ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದಿಗೆ ಮರು ನೋಂದಣಿ (ನವೀಕರಣ) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ನವೀಕರಿಸದಿದ್ದರೆ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚರಿಸಿದೆ.
ಏಕೆ ಈ ಹೊಸ ನಿಯಮ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಮಾಹಿತಿ
ಗೃಹಲಕ್ಷ್ಮಿ ಯೋಜನೆಯ ಖಾತೆಗಳನ್ನು ಮತ್ತೊಮ್ಮೆ ನವೀಕರಣ ಮಾಡುತ್ತಿರುವುದರ ಹಿಂದಿನ ಅಸಲಿ ಕಾರಣಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಚ್ಚಿಟ್ಟಿದ್ದಾರೆ:
ಮೃತರ ಹೆಸರಲ್ಲೂ ಹಣ ಡ್ರಾ: ಗೃಹಲಕ್ಷ್ಮಿ ಯೋಜನೆಯ ಲಕ್ಷಾಂತರ ಫಲಾನುಭವಿಗಳು ಈಗಾಗಲೇ ನಿಧನರಾಗಿದ್ದಾರೆ. ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೂ ಅವರ ಖಾತೆಗೆ ಸದ್ದಿಲ್ಲದೆ ಹಣ ಸಂದಾಯವಾಗುತ್ತಿತ್ತು
ಐಟಿ ಪಾವತಿದಾರರ ಜಾಲ: ಸರ್ಕಾರದ ನಿಯಮಗಳನ್ನು ಮೀರಿ ಸುಮಾರು 5೦ ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ (Income Tax) ಪಾವತಿದಾರರು ಈ ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ.
ಸಾಲಕ್ಕೆ ಜಮೆಯಾಗುತ್ತಿದ್ದ ಹಣ: ಕೆಲ ಫಲಾನುಭವಿಗಳ ಖಾತೆಗೆ ಸಂದಾಯವಾದ ಗೃಹಲಕ್ಷ್ಮಿ ಹಣವನ್ನು, ಬ್ಯಾಂಕುಗಳು ಈ ಮೊದಲು ಅವರು ಮಾಡಿದ್ದ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದವು.
ಮೊಬೈಲ್ ಸಂಖ್ಯೆ ಬದಲಾವಣೆ: ಶೇಕಡಾವಾರು ಫಲಾನುಭವಿಗಳ ಹಳೇ ಮೊಬೈಲ್ ಸಂಖ್ಯೆಗಳು ಬದಲಾಗಿದ್ದು, ಒಟಿಪಿ ಹಾಗೂ ಮೆಸೇಜ್ ತಲುಪುತ್ತಿರಲಿಲ್ಲ. ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಿ, ಕೇವಲ ಅರ್ಹ ಮತ್ತು ಜೀವಂತವಾಗಿರುವ ಫಲಾನುಭವಿಗಳಿಗೆ ಮಾತ್ರ ಹಣ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ನಿಧನರಾದವರ ಹೆಸರಲ್ಲಿ ಹಣ ಪಡೆಯುವುದನ್ನು ತಡೆಯಲು ಮೊದಲು ಜೀವಿತ ಪ್ರಮಾಣ ಪತ್ರ (Life Certificate) ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಈ ಸರಳ ‘ಬಯೋಮೆಟ್ರಿಕ್’ ವ್ಯವಸ್ಥೆಯನ್ನು ತರಲಾಗಿದೆ.
ಗೃಹಲಕ್ಷ್ಮಿ ಖಾತೆ ನವೀಕರಣ (KYC) ಮಾಡುವುದು ಹೇಗೆ?
ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ, ಮರು ನೋಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದೆ:
ಫಲಾನುಭವಿ ಮಹಿಳೆಯರು ತಮ್ಮ ಹತ್ತಿರದ ಬೆಂಗಳೂರು ಒನ್ (Bengaluru One) ಅಥವಾ ಕರ್ನಾಟಕ ಒನ್ (Karnataka One) ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಬೇಕು.
ಅಲ್ಲಿ ತಮ್ಮ ಚಾಲ್ತಿಯಲ್ಲಿರುವ (Presently Active) ಮೊಬೈಲ್ ಸಂಖ್ಯೆಯನ್ನು ನೀಡಿ, ಹೆಬ್ಬೆಟ್ಟಿನ ಗುರುತು (Biometric) ನೀಡುವ ಮೂಲಕ ಖಾತೆಯನ್ನು ಕೇವಲ ಒಂದು ಬಾರಿ ಮರು-ನೋಂದಣಿ ಮಾಡಿಸಿಕೊಳ್ಳಬಹುದು.
ಇಂತಹವರಿಗೆ ಗೃಹಲಕ್ಷ್ಮಿ ಯೋಜನೆ ಕಂಪ್ಲೀಟ್ ಕಟ್
ಐಟಿ ಪಾವತಿದಾರರು: ಫಲಾನುಭವಿಗಳು ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬಹುದು, ಆದರೆ ಅವರು ಯಾವುದೇ ಕಾರಣಕ್ಕೂ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
ಕಾರ್ಡ್ ರದ್ದು: ಇಲಾಖೆಯು ಈಗಾಗಲೇ ಸುಮಾರು ೨ ಲಕ್ಷಕ್ಕೂ ಅಧಿಕ ಕಾರ್ಡ್ಗಳನ್ನು ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡಿದೆ. ಇವರಲ್ಲಿ ಬಹುತೇಕರು ಆದಾಯ ತೆರಿಗೆ ಪಾವತಿಸುತ್ತಿರುವುದು ದೃಢಪಟ್ಟಿದ್ದು, ಇವರ ಗೃಹಲಕ್ಷ್ಮಿ ಯೋಜನೆ ತಕ್ಷಣದಿಂದಲೇ ರದ್ದಾಗಲಿದೆ.
ಸಚಿವರ ಅಧಿಕೃತ ಸ್ಪಷ್ಟನೆ:
ಸದ್ಯಕ್ಕೆ ನಾವು ಯಾವುದೇ ಫಲಾನುಭವಿಯ ಹೆಸರನ್ನು ನೇರವಾಗಿ ಡಿಲೀಟ್ ಮಾಡುತ್ತಿಲ್ಲ. ಇದು ಕೇವಲ ಒನ್ ಟೈಮ್ ಬಯೋಮೆಟ್ರಿಕ್ ಪದ್ಧತಿ ಮಾತ್ರ. ಮಹಿಳೆಯರು ಕೇವಲ ಒಂದು ಬಾರಿ ಕೇಂದ್ರಗಳಿಗೆ ಬಂದು ಬಯೋಮೆಟ್ರಿಕ್ ನೀಡಿದರೆ ಸಾಕು, ಹಣ ಎಂದಿನಂತೆ ಅವರ ಖಾತೆಗೆ ಜಮೆಯಾಗುತ್ತದೆ. ಆದರೆ, ನವೀಕರಣ ಮಾಡದ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ (Automatically) ರದ್ದಾಗುತ್ತವೆ.































