ಯುದ್ಧ ಮತ್ತು ಸಂಘರ್ಷಗಳ ನಡುವೆ ಬುದ್ಧನ ಸಂದೇಶ ದಾರಿ ದೀಪ: ಶಾಸಕ ಕೆ.ಸಿ.ವೀರೇಂದ್ರ

WhatsApp
Telegram
Facebook
Twitter
LinkedIn

 

ಕರ್ನಾಟಕ: ಕ್ರಿಸ್ತಪೂರ್ವದಲ್ಲೇ ಭಗವಾನ್ ಬುದ್ಧರು ಸಾರಿದ ಶಾಂತಿ ಮತ್ತು ಸಮಾನತೆಯ ತತ್ವಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಯುದ್ಧ ಮತ್ತು ಸಂಘರ್ಷಗಳ ನಡುವೆ ಬದುಕುತ್ತಿರುವ ನಮಗೆ ಬುದ್ಧನ ಸಂದೇಶಗಳು ದಾರಿದೀಪವಾಗಿವೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಎದುರಿನ ಬುದ್ಧ ಮೂರ್ತಿ ಬಳಿ ಶುಕ್ರವಾರ ಆಯೋಜಿಸಲಾದ ಭಗವಾನ್ ಬುದ್ದ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಗವಾನ್ ಬುದ್ದರು ರೋಹಿಣಿ ನದಿ ನೀರಿನ ಹಂಚಿಕೆಗಾಗಿ ಎರಡು ಸಾಮ್ರಾಜ್ಯಗಳ ನಡುವೆ ಯುದ್ಧ ನಡೆದಾಗ, ಆ ಹಿಂಸೆಯನ್ನು ತಡೆಯಲು ಬುದ್ಧರು ತಮ್ಮ ಕಿರೀಟ, ಸಿಂಹಾಸನ ಮತ್ತು ರಾಜ್ಯವನ್ನೇ ತ್ಯಜಿಸಿದರು.

ಇಂದು ನಾವು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಬುದ್ಧರು ಕ್ರಿಸ್ತಪೂರ್ವದಲ್ಲೇ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದ್ದರು. ಅವರ ಈ ವಿಚಾರಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಕಷ್ಟಗಳಿಗೆ ನಾವೇ ಹೊಣೆ ಹೊರತು ಬೇರೆಯವರಲ್ಲ ಎಂಬ ಬುದ್ಧನ ನುಡಿಯಂತೆ, ನಮ್ಮ ದುಃಖಗಳಿಗೆ ಅಜ್ಞಾನ ಮತ್ತು ಅವಿದ್ಯೆಯೇ ಕಾರಣ. ಸರಿಯಾದ ಜ್ಞಾನ ಮಾರ್ಗವನ್ನು ಅನುಸರಿಸುವ ಮೂಲಕ ನಾವು ನೆಮ್ಮದಿಯ ಜೀವನ ನಡೆಸಬಹುದು. ಭಗವಾನ್ ಬುದ್ಧನ ತತ್ವ ಮತ್ತು ಸಂದೇಶಗಳನ್ನು ಪ್ರಚಾರ ಮಾಡಲು ಪೂರಕವಾಗುವಂತೆ ಒಂದು ಸುಸಜ್ಜಿತ ಬುದ್ಧ ಮಂದಿರ ಅಥವಾ ಸಮುದಾಯ ಭವನವನ್ನು ನಿರ್ಮಿಸುವ ಭರವಸೆಯನ್ನು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಈ ಸಂದರ್ಭದಲ್ಲಿ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಇಂದಿನ ಅಶಾಂತ ಜಗತ್ತಿಗೆ ಯುದ್ಧದ ಅಗತ್ಯವಿಲ್ಲ, ಬದಲಾಗಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳು ಅತ್ಯಗತ್ಯವಾಗಿವೆ. ಮನುಷ್ಯ ಇಂದು ಭೌತಿಕ ಆಸೆಗಳ ಅಮಲಿನಲ್ಲಿ ತೇಲುತ್ತಿದ್ದಾನೆ. ಈ ಅತಿಯಾದ ಆಸೆಯಿಂದಾಗಿ ಮನುಷ್ಯನ ಮನಸ್ಸಿನಲ್ಲಿ ಶಾಂತಿ ಇಲ್ಲದಂತಾಗಿದೆ. ಗೌತಮ ಬುದ್ಧ ಅಂದೇ ಹೇಳಿದ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ತತ್ವ ಇಂದಿನ ವಾಸ್ತವ ಜಗತ್ತಿಗೆ ಹೆಚ್ಚು ಪ್ರಸ್ತುತವಾಗಿದೆ. ಇಂದು ನಾವು ಆರ್ಥಿಕವಾಗಿ ಎಷ್ಟೇ ಶ್ರೀಮಂತರಾಗಿರಬಹುದು, ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿರಬಹುದು. ಆದರೆ ಮಾನಸಿಕವಾಗಿ ಬಡವರಾಗುತ್ತಿದ್ದೇವೆ. ಮನುಷ್ಯನಿಗೆ ತನ್ನ ಮೇಲೆಯೇ ತನಗೆ ನಂಬಿಕೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಅತಿಯಾದ ಆಸೆಯಿಂದಾಗಿ ಆರೋಗ್ಯವನ್ನು ಲೆಕ್ಕಿಸದೆ ಐಶ್ವರ್ಯದ ಬೆನ್ನತ್ತುತ್ತೇವೆ. ಕೊನೆಗೆ ಅದೇ ಐಶ್ವರ್ಯವನ್ನು ಮಾರಿ ಆರೋಗ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಂತಿಮವಾಗಿ ಎರಡನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ಉತ್ತಮ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದರು. ಬುದ್ಧನ ಮಾರ್ಗವು ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ಬಸವಣ್ಣನವರಂತಹ ಮಹಾನ್ ಚೇತನಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ವಕೀಲ ಉಪನ್ಯಾಸಕ ವಿಶ್ವನಾಥ್ ಕೆ ವದ್ದಿಕೇರಿ ಬುದ್ದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಗಂಗಾಧರ ಮತ್ತು ಕಲಾತಂಡದವರು ನಾಡಗೀತೆ ಹಾಡಿ, ಬುದ್ದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ನಿರೂಪಿಸಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon