ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ವಿಚಾರದಲ್ಲಿ ನಮ್ಮ ಸರ್ಕಾರವು ಕೈಗೊಂಡಿರುವ ಮಹತ್ವದ ನಿರ್ಧಾರದ ಅನ್ವಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮುಂದುವರೆಸಲು ದಿ.27.04.2026ರಂದು ಸರ್ಕಾರವು ಆದೇಶಿಸಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯವು ನೀಡಿರುವ ಆದೇಶದನ್ವಯ ಶೇ.50 ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಅಳವಡಿಸಿಕೊಂಡು ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇ.15 ಮೀಸಲಾತಿಯಲ್ಲಿ ಪ್ರವರ್ಗ – ಎ, ಪ್ರವರ್ಗ- ಬಿ, ಪ್ರವರ್ಗ – ಸಿ ಗಳಿಗೆ ಒಳಮೀಸಲಾತಿಯನ್ನು ಕ್ರಮವಾಗಿ ಶೇ.5.25, 5.25, 4.5 ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಪ್ರವರ್ಗ – ಸಿಗೆ ಲಭ್ಯವಾಗುವ ಹುದ್ದೆಗಳಲ್ಲಿ/ಪ್ರವೇಶಾತಿ ಸೀಟುಗಳಲ್ಲಿ ಶೇ.20ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಗಳಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲಾಗಿದೆ.
ಈಗಾಗಲೇ ಆರ್ಥಿಕ ಇಲಾಖೆಯು ಅನುಮೋದನೆಯನ್ನು ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
ಈ ಕುರಿತಾದ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಲು ನನಗೆ ಅತೀವ ಸಂತೋಷವಾಗುತ್ತಿದೆ. ನಮ್ಮ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ನುಡಿದಂತೆ ನಡೆದಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವದೆಡೆಗಿನ ತನ್ನ ಬದ್ಧತೆಯನ್ನು ಎತ್ತಿಹಿಡಿಯುವ ಮೂಲಕ ರಾಜ್ಯದ ಜನತೆಯ ವಿಶ್ವಾಸಕ್ಕೆ ಮುಕ್ಕಾಗದಂತೆ ನಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

































