ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಮಿಷ ಒಡ್ಡಿ ಸೈಬರ್ ಮೂಲಕ ವಂಚಿಸಿದ ಪ್ರಕರಣವೊಂದನ್ನು ಮಂಗಳೂರು ಸೆನ್ ಕ್ರೈಮ್ ಪೊಲೀಸರು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳದ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ಮತ್ತು ರಿಯಾಝ್ ಎಂ.ವಿ. (45) ಬಂಧಿತ ಆರೋಪಿಗಳು ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯ ಬಹುದು ಎಂಬ ವಾಟ್ಸ್ಆ್ಯಪ್ ಸಂದೇಶವನ್ನು ಗಮನಿಸಿದ ಮಂಗಳೂರಿನ ವ್ಯಕ್ತಿಯೊಬ್ಬರು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು.
ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯಿಂದ ಪಾವತಿಯಾಗಿದ್ದ ಹಣದ ವಿವರಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114.4 ರೂಪಾಯಿ ವರ್ಗಾವಣೆಯಾಗಿರುವುದು ಹಾಗೂ ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾಗಿರುವುದು ಕಂಡು ಬಂತು.
ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆನ್ ಪೊಲೀಸ್ ಠಾಣಾಧಿಕಾರಿಯೂ ಆಗಿರುವ ಎಸಿಪಿ ರವೀಶ್ ನಾಯಕ್, ಇನ್ಸ್ ಪೆಕ್ಟರ್ ಸತೀಶ್ ಎಂ.ಪಿ., ಸಬ್ ಇನ್ಸ್ ಪೆಕ್ಟರ್ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.