ನವದೆಹಲಿ : ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದನ್ನು ಪ್ರಶ್ನಿಸಿ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಸುಮಾರು 300 ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಸಶಸ್ತ್ರ ಪಡೆಗಳ ಸಿಬ್ಬಂದಿ ಅಂಗವೈಕಲ್ಯ ಪಿಂಚಣಿಗೆ ಅರ್ಹರು ಎಂದು ಹೇಳಿದೆ.
ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ಬದಲಿಗೆ ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕೆ ಸಲ್ಲಿಸಬೇಕಾದ ಗೌರವ ಎಂದು ನ್ಯಾ. ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಇಂತಹ ಪಿಂಚಣಿಯಿಂದ ಸೇವೆಯ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾದ ಯೋಧನಿಗೆ ನೆರವು, ಆರ್ಥಿಕ ಭದ್ರತೆ ಹಾಗೂ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ. ಇದು ಧೈರ್ಯ ಮತ್ತು ಶ್ರದ್ಧೆಯಿಂದ ದೇಶಕ್ಕಾಗಿ ದುಡಿದ ಸೈನಿಕರೆಡೆಗೆ ಪ್ರಭುತ್ವ ನಿರ್ವಹಿಸಬೇಕಾದ ಜವಾಬ್ದಾರಿಯುತ ಕ್ರಮ ಎಂದು ಕೋರ್ಟ್ ತೀರ್ಪು ನೀಡಿದೆ.
ಅಂಗವೈಕಲ್ಯಕ್ಕೆ ತುತ್ತಾದ ಸೇನಾ ಸಿಬ್ಬಂದಿಯು ಸಂಘರ್ಷ ರಹಿತ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು ಎಂಬ ಒಂದೇ ಕಾರಣಕ್ಕೆ ಅವರಿಗೆ ಅಂಗವೈಕಲ್ಯ ಪಿಂಚಣಿ ನಿರಾಕರಿಸುವಂತಿಲ್ಲ. ಅತ್ಯಂತ ಕಠಿಣ ಹವಾಮಾನ ಮತ್ತು ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಲ್ಲಿ ಕಾಣಿಸಿಕೊಂಡ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ನ್ಯೂನತೆಗಳು ಸೇನಾ ಸೇವೆಯಿಂದ ಬಂದಿಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿ ವೈದ್ಯಕೀಯ ಮಂಡಳಿಯ ಮೇಲಿದೆ ಎಂದು ಪೀಠ ಹೇಳಿದೆ