ದೆಹಲಿ : ಅತಿಯಾಗಿ ಫಾಸ್ಟ್ ಫುಡ್ ತಿಂದು 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ವಿದ್ಯಾರ್ಥಿನಿ ಅಹಾನಾ ಎಂಬಾಕೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಅಹಾನಾ ಸುಮಾರು ದಿನಗಳಿಂದ ಹೊರಗಿನ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದ ಕಾರಣ ಆಕೆಯ ಸ್ಥಿತಿ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿವೆ ಮತ್ತು ಅವರ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇದಕ್ಕೆ ಚಿಕಿತ್ಸೆ ನೀಡಿದ್ರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯಕೀಯ ತಂಡ ತಿಳಿಸಿದೆ.
ಅಹಾನಾಗೆ ಚಿಕ್ಕ ವಯಸ್ಸಿನಿಂದಲ್ಲೂ ಚೌಮಿನ್, ಪಿಜ್ಜಾ ಮತ್ತು ಬರ್ಗರ್ಗಳಂತಹ ಫಾಸ್ಟ್ ಫುಡ್ಗಳನ್ನು ಇಷ್ಟಪಡುತ್ತಿದ್ದಳು. ಮನೆಯಲ್ಲಿ ಮಾಡುವ ಆಹಾರಗಳನ್ನು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಈ ಅಭ್ಯಾಸವೇ ಆಕೆಯ ಈ ಸ್ಥಿತಿಗೆ ಕಾರಣ, ಕೊನೆಗೂ ನಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದು ಆಕೆಯ ಪೋಷಕರು ಹೇಳಿದ್ದಾರೆ. ಈ ಘಟನೆ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆಂತಕ ಸೃಷ್ಟಿಸಿದೆ.
ಅತಿಯಾಗಿ ಫಾಸ್ಟ್ ಫುಡ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ, ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಗಂಭೀರ ಹಾನಿಯಾಗುತ್ತದೆ. ಇಂದು ನಡೆದಿರುವ ಈ ಘಟನೆಗೂ ಕೂಡ ಅದೇ ಕಾರಣ, ಅನಾರೋಗ್ಯಕರ ಆಹಾರ ಪದ್ಧತಿಗಳು ಚಿಕ್ಕ ವಯಸ್ಸಿನಲ್ಲಿಯೇ ಮಾರಕ ಪರಿಣಾಮಗಳನ್ನು ಬೀರುತ್ತವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

































