ಚಿತ್ರದುರ್ಗ: ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ. 2023ರ ಬಜೆಟ್ನಲ್ಲಿ ತಾವೇ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ. ಬಿಡುಗಡೆ ಸಂಬಂಧ ಯಾವುದೇ ರೀತಿ ಪ್ರಸ್ತಾಪ ಮಾಡಿಲ್ಲದಿರುವುದು ಬೇಸರದ ಸಂಗತಿ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದ್ದಾರೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಕೊಟ್ಟ ಮಾತು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ರಾಜ್ಯದ ಜನರ ಹಿತ ನಿರ್ಲಕ್ಷಿಸಿರುವುದು ಸರಿಯಲ್ಲ ಎಂದಿದ್ದಾರೆ.
ಚುನಾವಣೆ ನಡೆಯುವ ಐದು ರಾಜ್ಯಗಳಿಗೆ ಹೆಚ್ಚು ಮನ್ನಣೆ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಎಂಎಲ್ಎ, ಎಂಪಿ ಚುನಾವಣೆ ಸದ್ಯಕ್ಕೆ ಇಲ್ಲ. ಈ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವ ವಿಷಯವನ್ನು ಮುಂದಿನ ಚುನಾವಣೆ ವರೆಗೂ ಜೀವಂತ ಇಟ್ಟುಕೊಳ್ಳುವ ಪ್ರಯತ್ನ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಪ್ರಸ್ತಾಪಿಸಿಲ್ಲದಿರುವ ಕುರಿತು ಹಾಗೂ ಹಣ ಬಿಡುಗಡೆ ಮಾಡುವಂತೆ ರಾಜ್ಯದ ಎಲ್ಲ ಪಕ್ಷದ ಸಂಸತ್ ಸದಸ್ಯರು ಪ್ರಧಾನಿ ಬಳಿ ನಿಯೋಗ ತೆರಳಿ ಒತ್ತಡ ತರಬೇಕು. ಈ ಸಂಬಂಧ ಹೋರಾಟ ಸಮಿತಿಯೂ ತನ್ನ ಜವಾಬ್ದಾರಿ ನಿರ್ವಹಿಸಲಿದ್ದು, ಅನಿವಾರ್ಯವಾದಲ್ಲಿ ಹೋರಾಟ ನಡೆಸಲಿದೆ ಎಂದಿದ್ದಾರೆ.
ಯೋಗ, ಆಯುರ್ವೇದ ಇಂತಹ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ಇದೇ ರೀತಿ ಕೃಷಿ, ಕೈಗಾರಿಕೆಗೆ ಹೆಚ್ಚು ಆದ್ಯತೆ ನೀಡಬೇಕಿತ್ತು. ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕಿತ್ತು. ಈ ಕೆಲಸವನ್ನೇ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಇಂತಹ ನಿರ್ಧಾರಕೈಗೊಂಡಿರುವುದು ತಪ್ಪು. ಮುಗ್ದ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ನಡೆ ಆಗಿದೆ. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ದಿಢೀರ್ ಕುಸಿದಿರುವುದು ಬಜೆಟ್ ಉತ್ತಮವಾಗಿಲ್ಲವೆಂಬುದಕ್ಕೆ ಸಾಕ್ಷಿ ಆಗಿದೆ ಎಂದು ತಿಳಿಸಿದ್ದಾರೆ.

































