ಕೊಪ್ಪಳ: ಯಲಬುರ್ಗಾದ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಡ್ಡರ ಅವರು ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸದಸ್ಯತ್ವ ರದ್ದುಪಡಿಸಿ ಮುಂದಿನ ಆರು ವರ್ಷ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ.
2025ರ ಫೆಬ್ರವರಿ 22ರಂದು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪಿಎಂಎವೈ ಯೋಜನೆಯ ಮನೆಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚಿಸುವ ವೇಳೆ ಮಗ ಭೀಮೇಶನೊಂದಿಗೆ ಆಗಮಿಸಿದ ಸದಸ್ಯೆ ಶಾಂತಮ್ಮ ಪಿಡಿಒ ರತ್ನಮ್ಮ ಗುಂಡಣ್ಣನವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಬಗ್ಗೆ ಪಿಡಿಒ ರತ್ನಮ್ಮ ದೂರು ದಾಖಲಿಸಿದ್ದರು.
ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಭಿನಯದ ಪ್ರಕಾರ ಇಲಾಖೆಯ ಪೀಠಾಧಿಕಾರಿ ಯಲ್ಲಯ್ಯ ಅವರು ಶಾಂತಮ್ಮ ಅವರ ಸದಸ್ಯತ್ವ ರದ್ದುಗೊಳಿಸಿ ಮುಂದಿನ ಆರು ವರ್ಷ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಿದ್ದಾರೆ.
































