ಚಿತ್ರದುರ್ಗ : ಗರ್ಭಕೋಶದ ಕ್ಯಾನ್ಸರ್ನಿಂದ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿರುವುದು ನೋವಿನ ಸಂಗತಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಯೋಜನೆಗಳಿಗೆ ಕೈಜೋಡಿಸಿ ಅಗತ್ಯ ನೆರವು ಕಲ್ಪಿಸಬೇಕು ಎಂದು ಸರ್ಕಾರವನ್ನು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಒತ್ತಾಯಿಸಿದ್ದಾರೆ.
ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ಸಮಿತಿವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೀರ್ತಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಹೆಚ್.ಪಿ.ವಿ.ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.ಗರ್ಭಕಂಠದ ಕ್ಯಾನ್ಸರ್ ತಡೆಯುವುದಕ್ಕಾಗಿ 9 ವರ್ಷದಿಂದ ಹದಿನೈದು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ.ಲಸಿಕೆ ನೀಡುತ್ತಿರುವುದು ನಿಜಕ್ಕೂ ಸಮಾಜಮುಖಿ ಕೆಲಸವಾಗಿದೆ, ಇದರ ಬಗ್ಗೆ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಕಾರ್ಯಕ್ರಮವನ್ನು ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ಸಮಿತಿವತಿಯಿಂದ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಆರೋಗ್ಯವೇ ಪ್ರತಿಯೊಬ್ಬರಿಗೂ ದೊಡ್ಡ ಸಂಪತ್ತು. ನಮ್ಮ ದೇಶದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ, ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ಮೋದಿರವರು ಉಚಿತವಾಗಿ ಲಸಿಕೆಗಳನ್ನು ಒದಗಿಸಿದ್ದರ ಪರಿಣಾಮವಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆಯಾಯಿತು. ಕೋವಿಡ್ ಸಮಯದಲ್ಲಿ ನೆರೆ ದೇಶಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗಿತ್ತು. ಅಮೇರಿಕಾ ದೇಶವನ್ನು ಬಿಟ್ಟರೆ ಭಾರತವೂ ಆರೋಗ್ಯ ಸುಧಾರಣೆಯತ್ತ ಮುಂದೆ ಸಾಗುತ್ತಿದೆ. ಗರ್ಭಕೋಶದ ಕ್ಯಾನ್ಸರ್ನಿಂದ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಪಾಲ್ಗುಣೇಶ್ವರ ದೇವಸ್ಥಾನ ಸಮಿತಿಯವರು ಹೆಚ್.ಪಿ.ವಿ. ಲಸಿಕೆ ಕೊಡಿಸುತ್ತಿರುವುದರ ಪ್ರಯೋಜನವನ್ನು ಹೆಣ್ಣು ಮಕ್ಕಳು ಪಡೆದುಕೊಳ್ಳ ಬೇಕೆಂದು ವಿನಂತಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಯೋಜನೆಗಳಿಗೆ ಕೈಜೋಡಿಸಿ ಅಗತ್ಯ ನೆರವು ಕಲ್ಪಿಸಬೇಕು. ಸಮಾಜಕ್ಕೆ ಉಪಯುಕ್ತವಾದ ಲಸಿಕೆ ನೀಡುತ್ತಿರುವುದು ದೇವರ ಕೆಲಸ ಮಾಡಿದಂತೆ. ಆರೋಗ್ಯದ ಬಗ್ಗೆ ಎಲ್ಲರಲ್ಲಿಯೂ ಕಾಳಜಿ ಮೂಡಿಸುವ ಕೆಲಸವಾಗಬೇಕೆಂದರು.
ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ್, ವನಜಾಕ್ಷಮ್ಮ, ಪಾಲ್ಗುಣೇಶ್ವರ ಮತ್ತು ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಹೆಚ್.ರಂಗಸ್ವಾಮಿ, ಕೆ.ಜಿ.ಟಿ.ಗುರುಮೂರ್ತಿ ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಎಸ್.ಟಿ.ನವೀನ್ಕುಮಾರ್ ಮೃತುಂಜಯ ಹಾಜರಿದ್ದರು.
































