ಚಿತ್ರದುರ್ಗ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಗಂಗಾಮತಸ್ಥ ಸಮುದಾಯದವರಿಗೆ 2 ಎಂಎಲ್ಸಿ ಸ್ಥಾನ ನೀಡುವುದರ ಜೊತೆಗೆ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಜಿಲ್ಲಾ ಗಂಗಾಮತಸ್ಥ ಬೆಸ್ತರ ಸಂಘದ ಪದಾಧಿಕಾರಿಗಳು ಕಾಂಗ್ರೇಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಇದ್ದು, ಬಹುತೇಕ ಕಡೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇದಲ್ಲದೆ 2023 ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ಗಂಗಾಮತಸ್ಥರ ಪಾತ್ರ ಬಹಳ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯವನ್ಮು ಸಂಘಟಿಸಲು ಹಾಗೂ ವಿಧಾನ ಪರಿಷತ್ ನಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಿದ ಸಮಾಜದ ಮುಖಂಡರಾದ ತಿಪ್ಪಣ್ಣಪ್ಪ ಕಾಮಕನೂರು ಹಾಗೂ ಗಂಗಾಧರ್ ಅವರನ್ನು ಎಂಎಲ್ ಸಿ ಮಾಡಿ ಸಚಿವ ಸ್ಥಾನನೀಡಬೇಕು ಎಂದು ಆಗ್ರಹಿಸಿದರು.
ಸಮುದಾಯದ ಮುಖಂಡ ಶಿವಾನಂದ ಮಾತನಾಡಿ, ಕಳೆದ ಎರಡು ಚುನವಾಣೆಯಲ್ಲಿ ಕಾಂಗ್ರೇಸ್ ಪಕ್ಷ ನಮ್ಮ ಸಮುದಾಯಕ್ಕೆ ಪ್ರಾಧನ್ಯತೆ ನೀಡಿಲ್ಲ. ವಿಧಾನ ಸಭೆ ಮತ್ತು ಪರಿಷತ್ ನಲ್ಲಿ ನಮ್ಮ ಪರವಾಗಿ ಮಾತನಾಡುವವರು ಯಾರು ಇಲ್ಲ. ಈ ಹಿನ್ನೆಲೆಯಲ್ಲಿ ತಿಪ್ಪಣ್ಣ ಮತ್ತು ಗಂಗಾಧರ್ ಅವರನ್ನು ಎಂಎಲ್ ಸಿ ಮಾಡಿ, ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಶ್ರೀನಿವಾಸ್, ಚಂದ್ರಶೇಖರ್, ಕುಮಾರ್, ಸತ್ಯನಾರಾಯಣ ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು
































