ಹಾಸನ: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಂದರ್ಭದಲ್ಲಿ ಗೃಹ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವವರಿಗೆ ವಿನಾಯಿತಿ ನೀಡಬೇಕು. ದೀರ್ಘಾವಧಿಯಿಂದ ತೆರಿಗೆ ಪಾವತಿಸುತ್ತಿರುವವರ ಕಾರ್ಡ್ ಗಳನ್ನು ಎಪಿಎಲ್ ಗೆ ಬದಲಾಯಿಸಬೇಕು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ 2396 ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿವೆ. ಈಗಾಗಲೇ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾಯಿಸಿದ್ದಲ್ಲಿ ಅಗತ್ಯ ದಾಖಲೆಗಳನ್ನು ಪಡೆದು ಬಿಪಿಎಲ್ ಕಾರ್ಡ್ ನೀಡಲು ಮರುಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ, ತಾಯಿಗೆ ಬಿಪಿಎಲ್ ಕಾರ್ಡ್ ನೀಡಬಹುದು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು. 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯ ನಾಗರಿಕರು ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆಯಡಿ ಮನೆ ಬಾಗಿಲಿಗೆ ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

































