ಹಾಸನ: ಹಾಸನ ತಾಲ್ಲೂಕಿನ ಕಲ್ಕೆರೆ ಬಳಿ ನಾಪತ್ತೆಯಾಗಿದ್ದ 29 ವರ್ಷದ ಮಹಿಳೆ ಪ್ರಿಯಾಂಕ ಕೇಸ್ನಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಮೊದಲು ಕೊಲೆ ಅಥವಾ ಅಪಹರಣ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ ಸತ್ಯ ಬೇರೆಯಾಗಿ ಬೆಳಕಿಗೆ ಬಂದಿದೆ.
ಪ್ರಿಯಾಂಕ ತಮ್ಮ ಗಂಡನಿಂದ ದೂರವಾಗಲು ಮತ್ತು ಬೇರೊಬ್ಬ ವ್ಯಕ್ತಿಯ ಜೊತೆ ಸಂಸಾರ ಮಾಡಲು ಸ್ವಯಂ ಯೋಜನೆ ಮಾಡಿ ಓಡಿಹೋಗಿದ್ದರು ಎಂದು ಹಾಸನ ಎಸ್ಪಿ ಶುಭನ್ವಿತಾ ತಿಳಿಸಿದ್ದಾರೆ. ಇದರ ಜೊತೆಗೆ ಆಕೆಯ ಮತ್ತೊಂದು ಸಂಬಂಧದ ಸತ್ಯ ಕೂಡ ಬಯಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ, ಪ್ರಿಯಾಂಕಾ ಬೈಕ್ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ತೆರಳುತ್ತಿರುವುದು ಕಂಡುಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಗ್ರಾಮದ ಡೇವಿಡ್ ಎಂಬಾತನ ಮನೆಯಲ್ಲಿ ಪ್ರಿಯಾಂಕಾರನ್ನು ಪತ್ತೆ ಮಾಡಿದ್ದಾರೆ.
ತುಮಕೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ, ಸಹೋದ್ಯೋಗಿ ಡೇವಿಡ್ನನ್ನು ಪ್ರೀತಿಸುತ್ತಿದ್ದಳು. ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಹೋಗಲು ಅತ್ಯಾಚಾರ, ಅಪಹರಣ ನಡೆದಿದೆ ಎಂಬಂಥ ನಾಟಕ ಸೃಷ್ಟಿಸಿದ್ದಾಳೆ ಎಂದು ತಿಳಿದುಬಂದಿದೆ.

































