ಚಿತ್ರದುರ್ಗ: ರಾಜ್ಯ ರೈತಸಂಘ ನಗರದ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ರಂಗಭೂಮಿ ಕಲಾವಿದರು ಕ್ರಾಂತಿಗೀತೆಗಳನ್ನು ಹಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೊಡು ವರವ ಭದ್ರೆ, ದಾಹ ತೀರಿಸು ರೈತರ.., ನೀರಿಗಾಗಿ ಒಂದು ಮಾತನಾಡುವಿರಾ.., ಶ್ರಮಿಕ ವರ್ಗದ ಧಾರುಣ ಕತೆಯ ಕೇಳುವಿರಾ.., ಕಾಡಿಗೆ ಕೊಡಲಿಯಿಟ್ಟು ಬೋಳು ಮಾಡಿದೆ. ಬೀದಿರಮ್ಮ ತಾಯಿ ಕೇಳಿ.., ನೀರೆಂಬುದು ಬಯಸಿದಾಗಲೆಲ್ಲ ಸಿಗುವ ಮಾಯಾ ವಸ್ತುವಲ್ಲ..,
ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರಿಕೋಲು.., ಗೋಧಿಯ ತೆನೆ ನೋಡಾ, ರಾಗಿಯ ತೆನೆ ನೋಡಾ.., ಜಗತ್ತನ್ನೇ ಜಗ್ಗಿಸುತ್ತಿದೆ ಜಾಗತೀಕರಣ.., ನಮ್ಮೂರ ಭೂಮಿ ಮ್ಯಾಗ, ಬೆಳೆದೈತ ಬೆಳೆಯ ನೋಡಾ.., ಮುಂತಾದ ಜನಪದ, ಹೋರಾಟದ ಕ್ರಾಂತಿ ಗೀತೆಗಳನ್ನು ರಂಗಭೂಮಿ ಕಲಾವಿದರಾದ ಕೆಪಿಎಂ ಗಣೇಶಯ್ಯ, ಎಂ.ಕೆ.ಹರೀಶ್, ಎಸ್.ಚನ್ನಬಸಪ್ಪ, ಡಿ.ಹೇಮಂತ್, ಹನುಮಂತಪ್ಪ, ತಿಪ್ಪೇಸ್ವಾಮಿ ಹಾಡಿ ಗಮನಸೆಳೆದರು. ತಮಟೆ, ಕಂಜರ, ಡೋಲಾಕ್, ಹಾರ್ಮೋನಿಯಂ, ತಾಳಗಳು ಸದ್ದು ಮಾಡಿದವು. ಮೇಳೈಸಿದವು.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ಕಾರ್ಮಿಕ, ಕನ್ನಡ ಪರ, ದಲಿತ ಸೇರಿ ವಿವಿಧ ಸಂಘಟನೆಗಳು 30 ವರ್ಷಗಳ ಕಾಲ ಹೋರಾಟ ನಡೆಸಿದ ಫಲ ಯೋಜನೆ ಜಾರಿಗೊಂಡು 17 ವರ್ಷವಾಗಿದ್ದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ ಎಂದು ದೂರಿದರು.
ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಜಿಪಂಜಿಲ್ಲೆಯ ಜನರ ಬದುಕು ಅಧ್ಯಯನ ನಡೆಸಿರುವ ಎಲ್ಲ ವರದಿಗಳು ಭವಣೆ ತೆರೆದಿಟ್ಟಿವೆ. ಹನಿ ನೀರಿಗಾಗಿ ಪರಿತಪಿಸುವ ಸ್ಥಿತಿ ಎಲ್ಲರಿಗೂ ಗೊತ್ತಿದೆ. ನೀರಿಲ್ಲದೆ ಬೆಳೆಗಳು ಒಣಗಿ ಕೃಷಿಕರ ಬದುಕು ಬೀದಿಗೆಬಿದ್ದಿದೆ. ಇದಕ್ಕೆ ಏಕೈಕ ಪರಿಹಾರ ಭದ್ರಾ ನೀರು ಜಿಲ್ಲೆಗೆ ತುರ್ತು ಹರಿಸುವುದು. ಈ ನಿಟ್ಟಿನಲ್ಲಿ ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವೆ ಎಂದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ಈಚಘಟ್ಟ ಸಿದ್ದವೀರಪ್ಪ, ಮುಖಂಡರಾದ ರಂಗಣ್ಣ, ತಿಪ್ಪೇಸ್ವಾಮಿ, ಸಣ್ಣೀರಪ್ಪ, ಸಣ್ಣತಿಮ್ಮಣ್ಣ, ನಿಂಗಪ್ಪ, ಪ್ರಸನ್ನ, ರೆಡ್ಡಿಹಳ್ಳಿ ವೀರಣ್ಣ, ವೆಂಕಟೇಶ್, ವೀರಭದ್ರಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಜೋಗಿಮಟ್ಟಿ ಮಹೇಶಬಾಬು, ಚಳ್ಳಕೆರೆ ಬಸವರಾಜ್, ಆರ್.ಶೇಷಣ್ಣಕುಮಾರ್ ಇತರರಿದ್ದರು.































