ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕೆ ಆಗ್ರಹಿಸಿ ಅಮರಣಾಂತ ಉಪವಾಸ ಕೈಗೊಂಡಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ನಾಗರಿಕ ಸಮಾಜವನ್ನೇ ಅಣಕಿಸುವಂತಿದೆ ಎಂದು ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ತಿಳಿಸಿದರು. ಒನಕೆ ಓಬವ್ವ ವೃತ್ತದಲ್ಲಿ ಮಾ.2ರಿಂದ ಐದು ದಿನಗಳ ಕಾಲ ಉಪವಾಸ ಕೈಗೊಂಡಿದ್ದ ತಿಪ್ಪೇಸ್ವಾಮಿ ಅವರನ್ನು ಆರಂಭದಲ್ಲಿಯೇ ಜಿಲ್ಲಾಡಳಿತ ಮನವೊಲಿಸಬಹುದಿತ್ತು. ಆದರೆ, ನಿರ್ಲಕ್ಷö್ಯ ವಹಿಸಿದ ಪರಿಣಾಮ ಅನ್ನದಾತ ಆಸ್ಪತ್ರೆಯಲ್ಲಿರುವಂತೆ ಆಗಿದೆ ಎಂದು ಬೇಸರಿಸಿದರು.
ಜಿಲ್ಲೆಯ ಪ್ರತಿಯೊಬ್ಬರಿಗೂ ನೀರು ಬೇಕು. ಅದಕ್ಕಾಗಿ ಹೋರಾಟ ನಡೆಸುತ್ತಿದ್ದ ರೈತಮುಖಂಡ ಅಸ್ವಸ್ಥಗೊಂಡಿರುವುದು ಅತ್ಯಂತ ದುಃಖದ ವಿಷಯ. ನಾಗರಿಕರಿಗಾಗಿ ಯಾವುದೇ ವ್ಯಕ್ತಿ ಹೋರಾಟ ನಡೆಸಿದರೆ, ಅದಕ್ಕೆ ಸ್ಪಂದಿಸುವುದು ಅಧಿಕಾರಸ್ಥರ ಕರ್ತವ್ಯ. ಈ ನಿಟ್ಟಿನಲ್ಲಿ ಲೋಪ ಆಗಿದೆ ಎಂದರು.
ತಿಪ್ಪೇಸ್ವಾಮಿ ಅವರಿಗೆ ಆಗಿರುವ ಅನ್ಯಾಯ ಖಂಡಿಸಿ, ಚಿಕಿತ್ಸೆ ವೆಚ್ಚ ಭರಿಸುವಂತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕಾಗಿ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರಮುಖರು ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಜಿಲ್ಲೆಯನ್ನು ಎಲ್ಲ ಸರ್ಕಾರಗಳು ಕಡೆಗಣಿಸಿವೆ. ಈ ಬಾರಿಯೂ ಅದು ಮುಂದುವರಿದಿದೆ. ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಬದ್ಧತೆ ಪ್ರದರ್ಶಿಸಬೇಕಿತ್ತು. ಆದರೆ, ಜಿಲ್ಲೆಯ ರಾಜಕಾರಣಿಗಳ ಒತ್ತಡ ಇಲ್ಲದ ಕಾರಣಕ್ಕೆ ಅವರು ನಿರ್ಲಕ್ಷö್ಯ ವಹಿಸಿದ್ದಾರೆ ಎಂದರು.
ಇನ್ನೂ ರೈತರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡ ತಕ್ಷಣವೇ ಅವರನ್ನು ಮನವೊಲಿಸುವ ಕೆಲಸ ಮಾಡದೆ ಜಿಲ್ಲಾಡಳಿತ ತಪ್ಪು ಮಾಡಿದೆ. ಈಗ ರೈತ ಆಸ್ಪತ್ರೆಗೆ ದಾಖಲಾಗಿದ್ದು, 15 ಲಕ್ಷ ರೂ. ವೆಚ್ಚವಾಗಲಿದೆ. ಈ ಹಣವನ್ನು ಜಿಲ್ಲಾಡಳಿತ ಸಂಪೂರ್ಣ ಭರಿಸಲು ತಕ್ಷಣವೇ ಜಿಲ್ಲಾಡಳಿತ ಮುಂದಾಗಬೇಕೆಂದು ಕೋರಿದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಿ ಎಂದು ಉಪವಾಸ ಕುಳಿತಿದ್ದ ಹೋರಾಟಗಾರನನ್ನು ಅತ್ಯಂತ ಅಮಾನವೀಯವಾಗಿ ಜಿಲ್ಲಾಡಳಿತ ನಡೆಸಿಕೊಂಡಿದೆ. ಈ ಕುರಿತು ರಾಜ್ಯಮಟ್ಟದ ರೈತನಾಯಕರು ಶೀಘ್ರದಲ್ಲಿ ಜಿಲ್ಲೆಗೆ ಆಗಮಿಸಿ ಹೋರಾಟ ನಡೆಸಲಿದ್ದಾರೆ ಎಂದರು. ರೈತರು ಬೇಡುವವರಲ್ಲ, ಕೊಡುವವರು. ನೀರು ಕೊಟ್ಟರೇ ನಾವು ಎಲ್ಲವನ್ನೂ ಬೆಳೆದು ಕೊಡುತ್ತೇವೆ. ಆದರೆ, ನೀರಿಗಾಗಿ ಸತ್ಯಾಗ್ರಹ ಕುಳಿತ ರೈತನತ್ತ ಗಮನಹರಿಸದಿರುವುದರ ಪರಿಣಾಮ ರೈತಮುಖಂಡನೊಬ್ಬ ಅಸ್ವಸ್ತಗೊಂಡಿದ್ದಾರೆ. ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಆತ್ಮಸ್ಥೆöÊರ್ಯ ತುಂಬುವ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಟಿಪ್ಪು ಖಾಸೀಂ ಆಲಿ ಮಾತನಾಡಿ, ನೀರು ಎಲ್ಲ ಧರ್ಮದವರಿಗೆ ಬೇಕು. ಜೀವಜಲಕ್ಕಾಗಿ ಹೋರಾಟ ನಡೆಸಿದ ರೈತಮುಖಂಡ ಅನಾರೋಗ್ಯಕ್ಕೆ ಒಳಗಾಗಿರುವುದು ದುಃಖದ ವಿಷಯ ಎಂದರು.
ವೀರ ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ.ಆನಂದ್ ಮಾತನಾಡಿ, ಎಲ್ಲ ಸಂಘಟನೆಗಳನ್ನು ಒಳಗೊಂಡು ಬೃಹತ್ ಪ್ರತಿಭಟನೆ ಆಯೋಜಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಹಿರಿಯರ ನಿರ್ಧಾರಕ್ಕೆ ನಾವು ಬದ್ಧ. ಮುಷ್ಕರ ಯಶಸ್ಸುಗೊಳಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಸ್.ಅನಿಲ್ಕುಮಾರ್, ಪ್ರ.ಕಾರ್ಯದರ್ಶಿ ಚಂದ್ರಶೇಖರ ಪಾಟೀಲ್, ಉಪಾಧ್ಯಕ್ಷ ಗಿರೀಶ್ ನಾಯ್ಕ್ ಮಾತನಾಡಿ, ನಮ್ಮ ಬಾಯಾರಿಕೆತಣಿಸಲು ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದು, ಈ ವೇಳೆ ಮುಖಂಡರೊಬ್ಬರು ಅಸ್ವಸ್ಥರಾಗಿರುವುದು ಆಡಳಿತ ವರ್ಗದ ನಿರ್ಲಕ್ಷö್ಯಕ್ಕೆ ಕೈಗನ್ನಡಿಯಾಗಿದೆ ಎಂದುಹೇಳಿದರು.
ಯಾರೇ ಧರಣಿ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಕೈಗೊಂಡರೇ ಪ್ರತಿಭಟನಾಕಾರರ ಮನವಿ ಆಲಿಸುವುದು ಅಧಿಕಾರಿಗಳ ಹೊಣೆಗಾರಿಕೆ ಆಗಬೇಕು. ಇದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವುದಕ್ಕೆ ಕಡಿವಾಣ ಬೀಳಲಿದೆ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ನರೇನಹಳ್ಳಿ ಅರುಣ್ಕುಮಾರ್, ಚಳ್ಳಕೆರೆ ಬಸವರಾಜ್,
ಜೋಗಿಮಟ್ಟಿ ಮಹೇಶಬಾಬು, ಆರ್.ಶೇಷಣ್ಣಕುಮಾರ್, ರವಿಕುಮಾರ್, ಎಂ.ದಯಾನಂದ್, ಮಲ್ಲಿಕಾರ್ಜುನ್ ಪಾರ್ಥ ಇತರರಿದ್ದಾರೆ.































