ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ಜನ ಸಾಗರೋಪಾದಿಯಲ್ಲಿ ಸೇರುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಕರೆ ನೀಡಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿ, ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಹಳೆ ನಿಯಮದಂತೆ ನೇಮಕಾತಿಗೆ ಸರ್ಕಾರವನ್ನು ಒತ್ತಾಯಿಸಲು ಮಾ.24 ರಂದು ನಡೆಯುವ ಪ್ರತಿಭಟನೆಗೆ ಸಂಬಂಧಿಸಿದಂತೆ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ವಿಭಾಗೀಯ ಮಟ್ಟದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ನಾಗಮೋಹನ್ದಾಸ್ ಆಯೋಗ ಸಂಗ್ರಹಿಸಿರುವ ದತ್ತಾಂಶ ಒಂದು ಸಮಾಜಕ್ಕೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗ ಮುಂದುವರೆದಿದೆ ಎಂದು ನಾಗಮೋಹನ್ದಾಸ್ ಆಯೋಗ ಹೇಳಿಲ್ಲ. ಸಂಗ್ರಹಿಸಿರುವ ದತ್ತಾಂಶಕ್ಕೂ ಸರ್ಕಾರಕ್ಕೆ ನೀಡಿರುವ ವರದಿಗೂ ವ್ಯತ್ಯಾಸವಿದೆ. ಅಲೆಮಾರಿ ಸಮುದಾಯಗಳಿಗೆ ಪರಿಶಿಷ್ಟ ಜಾತಿಯ ಸೂಕ್ಷ್ಮ ವಲಯಗಳಿಗೆ ನ್ಯಾಯ ಸಿಗಬೇಕು. ಎಸ್ಸಿಪಿ. ಟಿಎಸ್ಪಿ. ಹಣವನ್ನು ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಸದೆ ನಮ್ಮ ಸಮುದಾಯದ ಅಭಿವೃದ್ದಿಗೆ ಮೀಸಲಿಡಬೇಕೆಂದು ಹೋರಾಟದಲ್ಲಿ ಒತ್ತಾಯಿಸಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಭೋವಿ ಅಭಿವೃದ್ದಿ ನಿಗಮ ಹಾಗೂ ಬಂಜಾರ ಅಭಿವೃದ್ದಿ ನಿಗಮಗಳಿಗೆ ಹಣ ಮಂಜೂರು ಮಾಡಲಿ. ಸಮಾಜದ ಬಗ್ಗೆ ಕಾಳಜಿಯಿರುವವರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಎಚ್ಚರಿಸುವ ಮೂಲಕ ಕುಟುಂಬ ಬಂಧು-ಬಳಗದವರ ಮನವೊಲಿಸಿ ಪ್ರತಿಭಟನೆಗೆ ಕರೆ ತನ್ನಿ. ಇಲ್ಲವಾದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆಂದು ಎಚ್ಚರಿಸಿದರು.

ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ಸ್ವಾಮೀಜಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದಲೂ ಚಳುವಳಿ, ಪ್ರತಿಭಟನೆಗಳು ನಡೆಯುತ್ತಿವೆ. ಶಾಸಕರು, ಮಂತ್ರಿಗಳ ಮನೆ, ವಿಧಾನಸೌಧಕ್ಕೂ ಮುತ್ತಿಗೆ ಹಾಕಿದ್ದೇವೆ. ಭೋವಿ, ಬಂಜಾರರನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿರುವುದನ್ನು ವಿರೋಧಿಸಿ ಮಾ.24 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ ಅಲೆಮಾರಿ ಜನಾಂಗದವರಲ್ಲಿ ಮನವಿ ಮಾಡಿದರು.

ಮಾ.27 ರಂದು ರಾಜ್ಯ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಗ್ಗೆ ಎಲ್ಲರಲ್ಲೂ ಆತಂಕವಿದೆ. ರಾಜ್ಯ ಸರ್ಕಾರ ನಡುಗುವ ರೀತಿಯಲ್ಲಿ ಹಿಂದೆ ಪ್ರತಿಭಟನೆಯಾಗಿದೆ. ಈಗಲು ಆಗಬೇಕು. ಏಕೆಂದರೆ ಇದು ನಮ್ಮ ಸಮುದಾಯದ ಅಳಿವು-ಉಳಿವಿನ ಪ್ರಶ್ನೆ? ಮೀಸಲಾತಿ ಕಿಚ್ಚು ಹಚ್ಚಿ ಒಡಕು ಮೂಡಿಸುತ್ತಿರುವುದರಿಂದ 101 ಜಾತಿಗಳು ಪ್ರತಿಷ್ಟೆ, ಭಿನ್ನಾಭಿಪ್ರಾಯ, ವೈಮನಸ್ಸು ಬಿಟ್ಟು ಒಂದಾಗಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೋ ಒತ್ತಡಕ್ಕೆ ಮಣಿದಿರುವುದರಿಂದ ನಮಗೆ ಹೋರಾಟ ಅನಿವಾರ್ಯ. ಒಂದು ಕಡೆ ಕಾನೂನು ಹೋರಾಟವಾದರೆ ಮತ್ತೊಂದೆಡೆ ಬೀದಿಗಿಳಿದು ಸರ್ಕಾರಕ್ಕೆ ನಮ್ಮ ಬಲ ಪ್ರದರ್ಶಿಸಬೇಕಿದೆ ಎಂದರು.

ಭೋವಿ ಅಭಿವೃದ್ದಿ ನಿಗಮದ ಅಧಕ್ಷ ನೇರ್ಲಗುಂಟೆ ರಾಮಪ್ಪ ಮಾತನಾಡಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡು ಸರ್ಕಾರಕ್ಕೆ ಬುದ್ದಿ ಕಲಿಸಬೇಕಿದೆ. ಕೆಲವು ಮಂತ್ರಿಗಳು ಶಾಸಕರು ನಮ್ಮ ಪರವಾಗಿದ್ದಾರೆ. ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಕಡೆ ಮಾಹಿತಿ ಕೊಡಲಾಗಿದೆ.

ಯಾವುದೇ ಪಕ್ಷಗಳಾಗಲಿ ನಮಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಂಡಿರುವುದರಿಂದ ಜನಸಂಖ್ಯೆ ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆಂಬ ಭರವಸೆಯಿದೆ. 2023 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗದ ದೊಡ್ಡ ಕೊಡುಗೆಯಿದೆ. 56,432 ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗಬಾರದೆಂದರೆ ಹೋರಾಟ ಮಾಡೋಣ ಎಂದರು.

ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವಾನಾಯ್ಕ ಮಾತನಾಡುತ್ತ ಕೇಂದ್ರ ರಾಜ್ಯ ಸರ್ಕಾರ ಮೊದಲು ಸಂವಿಧಾನ ಓದಿ ಯಾರ್ಯಾರಿಗೆ ಏನೇನು ಸೌಲತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲಿ. 101 ಜಾತಿಗಳನ್ನು ಹೊಡೆಯಲು ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ಒಂದು ವರ್ಗ ಹುನ್ನಾರ ನಡೆಸುತ್ತಿದೆ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ರೋಸ್ಟರ್ ಪದ್ದತಿ ಅಪಾಯಕಾರಿ. ನಮ್ಮನ್ನೆಲ್ಲಾ ಸಮಾಧಿ ಮಾಡುತ್ತಿದೆ ಎನ್ನುವ ಅರಿವು ಮೂಡಿಸಲು ನಮ್ಮ ಹೋರಾಟ ಎಂದು ಹೇಳಿದರು.

ಭೋವಿ ಸಮಾಜದ ರಾಜ್ಯಾಧ್ಯಕ್ಷ ಆನಂದ್ ಮಾತನಾಡಿ ಮಾ.24 ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡು ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸಬೇಕಿದೆ. ಭೋವಿ, ಲಂಬಾಣಿ, ಕೊರಚ, ಕೊರಮ ಬೇರೆಯಲ್ಲ. ಎಲ್ಲರೂ ಒಂದೆ. ಹೋರಾಟ ಮಾಡಿ ನ್ಯಾಯ ಪಡೆಯದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಮಾತನಾಡುತ್ತ ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬರುವ 24 ರಂದು ನಡೆಯುವ ಬೃಹತ್ ಹೋರಾಟದಲ್ಲಿ ಜನಾಂಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವುದಾಗಿ ಭರವಸೆ ನೀಡಿದರು.

ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರನಾಯ್ಕ ಮಾತನಾಡಿ ಮೊದಲಿನಿಂದಲು ಹೋರಾಟದ ಜೊತೆ ಪ್ರಾಮಾಣಿಕವಾಗಿದ್ದೇವೆ. ತಾಲ್ಲೂಕು ಮಟ್ಟದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಭೆ ಕರೆದು ಎಲ್ಲಾ ಸಮಾಜದ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುವುದೆಂದು ತಿಳಿಸಿದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಜನ ಸಾಗರೋಪಾದಿಯಲ್ಲಿ ಭಾಗವಹಿಸಿ ಸರ್ಕಾರವನ್ನು ಮಣಿಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಜಿಲ್ಲೆಯಿಂದ ಕನಿಷ್ಠ ಹತ್ತು ಸಾವಿರ ಜನರಾದರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ, ನಿವೃತ್ತ ನ್ಯಾಯಾಧೀಶರಾದ ವೀರಭದ್ರಪ್ಪ, ರಾಘವೇಂದ್ರನಾಯ್ಕ, ಸಿಂಡಿಕೇಟ್ ಸದಸ್ಯ ದಾವಣಗೆರೆಯ ದ್ಯಾಮಣ್ಣ, ಮಂಜುಳ ಬಿ.ಜಯದೇವ, ಆದರ್ಶ ಯಲ್ಲಪ್ಪ ಇವರುಗಳು ಮಾತನಾಡಿದರು.

ಭೋವಿ ಸಮಾಜದ ಮೋಹನ್, ಹನುಮಂತಪ್ಪ ಗೋಡೆಮನೆ, ಡಿ.ತಿಮ್ಮಣ್ಣ, ಬಂಜಾರ ಸಮಾಜದ ಸುರೇಶ್ನಾಯ್ಕ, ಪ್ರಕಾಶ್ರಾಮನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ, ತುಳಸಿ ರಮೇಶ್, ಗೀತ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹಾವೇರಿ ಜಿಲ್ಲೆಗಳಿಂದ ಭೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಜನಾಂಗದ ಮುಖಂಡರುಗಳು ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon