ಹರಿಯಾಣ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಇತ್ತೀಚೆಗಷ್ಟೇ ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆಯುವ ಮೂಲಕ ಆಕಾಶ್ ಧುಲ್ ಅವರು ದೇಶದ ಗಮನ ಸೆಳೆದಿದ್ದಾರೆ
ಆಕಾಶ್ ಧುಲ್ ಅವರು ಹರಿಯಾಣದ ಪಂಚಕುಲ ಮೂಲದವರು. ಅವರು ಚಂಡೀಗಢದ ಸೆಕ್ಟರ್ 26 ರಲ್ಲಿರುವ ಸೇಂಟ್ ಕಬೀರ್ ಶಾಲೆ ಮತ್ತು ಸೆಕ್ಟರ್ 27 ರ ಭವನ್ ವಿದ್ಯಾಲಯ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಬಿ.ಕಾಂ (ಆನರ್ಸ್) ಪದವಿ ಪಡೆದರು.
2022 ರಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಆಕಾಶ್ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರು. 2023ರಲ್ಲಿ 342ನೇ ರ್ಯಾಂಕ್ ಮತ್ತು 2024ರಲ್ಲಿ 290ನೇ ರ್ಯಾಂಕ್ ಪಡೆದರು. ಇದೀಗ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.
ಬಾಲ್ಯದಿಂದಲೂ ನನಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ್ದೆ. ಮಾತ್ರವಲ್ಲ ಅದಕ್ಕಾಗಿಯೇ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದೆ. ಹಿಂದಿನ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೂ, ರ್ಯಾಂಕ್ ಬಗ್ಗೆ ಅತೃಪ್ತಿ ಇತ್ತು. ಹಾಗಾಗಿ, ಮೂರನೇ ಬಾರಿ ಪ್ರಯತ್ನ ಪಟ್ಟೆ. ಈಗ, ಮೂರನೇ ರ್ಯಾಂಕ್ ಪಡೆಯುವ ಮೂಲಕ, ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದೇನೆ ಎಂದು ಆಕಾಶ್ ಧುಲ್ ಸಂತಸ ವ್ಯಕ್ತಪಡಿಸಿದ್ದಾರೆ.

































