ಬೆಂಗಳೂರು: ಮುಂದಿನ ನಾಲ್ಕು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮುಂದಿನ ನಾಲ್ಕು ದಿನಗಳವರೆಗೆ ಚದುರಿದಂತೆ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಇತರೆ ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.































