ಮಂಡ್ಯ : ನಗರಸಭೆ ಪೌರಕಾರ್ಮಿಕರಾದ ಮಹೇಶ್ ಮತ್ತು ಸುಬ್ಬಲಕ್ಷ್ಮಮ್ಮ ಅವರಿಗೆ ಸ್ವಚ್ಛತಾ ಕಾರ್ಯದ ವೇಳೆ ಚಿನ್ನದ ಉಂಗುರ ಸಿಕ್ಕಿದ್ದು, ಸುಮಾರು 1.35 ಲಕ್ಷ ರೂಪಾಯಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ತೋರಿದ್ದಾರೆ.
ಹಿನ್ನೆಲೆ: ವಕೀಲ ಆರ್. ಮಹೇಶ್ ಕೃಷ್ಣ ಅವರು ಎಂದಿನಂತೆ ಬೆಳಗ್ಗೆ ಕುವೆಂಪು ನಗರದ ಬಲಮುರಿ ದೇವಾಲಯದ ಬಳಿ ವಾಯುವಿಹಾರಕ್ಕೆ ತೆರಳಿದ್ದಾಗ 8.5 ಗ್ರಾಂ ಚಿನ್ನದ ಉಂಗುರ ಕಳೆದುಕೊಂಡಿದ್ದಾರೆ. ಎಷ್ಟೇ ಹುಡುಕಾಡಿದರೂ ಅವರಿಗೆ ಉಂಗುರ ಸಿಕ್ಕಿರಲಿಲ್ಲ. ಬಳಿಕ ದೇವಾಲಯ ಸಮೀಪ ಅಂಗಡಿಯಲ್ಲಿ ವಿಚಾರಿಸಿದಾಗ ಪೌರಕಾರ್ಮಿಕರಿಗೆ ಉಂಗುರ ದೊರೆತ ಮಾಹಿತಿ ಗೊತ್ತಾಗಿದೆ. ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿಯಲ್ಲಿ ಪೌರಕಾರ್ಮಿಕರಾದ ಮಹೇಶ್ ಮತ್ತು ಸುಬ್ಬಲಕ್ಷ್ಮಮ್ಮ ಅವರು ಮಹೇಶ್ ಕೃಷ್ಣ ಅವರಿಗೆ ಉಂಗುರವನ್ನು ವಾಪಸ್ ನೀಡಿದ್ದಾರೆ.
(ಸಾಂದರ್ಭಿಕ ಚಿತ್ರ )































