ಚಿತ್ರದುರ್ಗ: ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಬಿತ್ತನೆಗೆ ಪೂರಕವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಖರೀದಿ ಪ್ರಕ್ರಿಯೆ ಚುರುಕುಗೊಂಡಿದೆ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕೆಲವು ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.
ಜಿಲ್ಲೆಯ ಯಾವುದೇ ಅಧಿಕೃತ ರಸಗೊಬ್ಬರ ಮಾರಾಟಗಾರರು ರಸಗೊಬ್ಬರದ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಮಾರಾಟ ಬೆಲೆಗಿಂತ (ಒಖP) ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಬಾರದು. ಪ್ರತಿ ಮಾರಾಟ ಮಳಿಗೆಯ ಮುಂದೆ ರಸಗೊಬ್ಬರದ ದರ ಪಟ್ಟಿ ಮತ್ತು ದೈನಂದಿನ ದಾಸ್ತಾನು ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ರಸಗೊಬ್ಬರ (ನಿಯಂತ್ರಣ) ಆದೇಶ 1985ರ ನಿಯಮಾವಳಿಗಳ ಅನ್ವಯ, ಈ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಕೃತಕ ಅಭಾವ ಸೃಷ್ಟಿಸುವುದು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹ ಮಾರಾಟಗಾರರ ಪರವಾನಗಿಯನ್ನು ತಕ್ಷಣವೇ ಅಮಾನತು ಅಥವಾ ರದ್ದು ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಬಿ. ಎಚ್ಚರಿಕೆ ನೀಡಿದ್ದಾರೆ.































