ಚಿತ್ರದುರ್ಗ : ಜಿಲ್ಲಾಸ್ಪತ್ರೆಗೆ ಹೈಟೆಕ್ ಸ್ಪರ್ಶ.!  ಡಾ.ಎಸ್.ಪಿ.ರವೀಂದ್ರ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿ ರೂ.114 ಕೋಟಿ ವೆಚ್ಚದಲ್ಲಿ 180 ಹಾಸಿಗೆಗಳ ಸುಸಜ್ಜಿತ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಎಚ್‍ಡಿಎಫ್‍ಸಿ ಬ್ಯಾಂಕ್ ಸಿಎಸ್‍ಆರ್ ನಿಧಿಯಡಿ ಬರೋಬ್ಬರಿ ರೂ. 1.80 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆ ನೀಡಿದ್ದು, ಸಾರ್ವಜನಿಕರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ಜಿಲ್ಲಾಸ್ಪತ್ರೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯ ಬಿ.ಸಿ. ರಾಯ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ನೀಡಿರುವ ಸೇವೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಆಸ್ಪತ್ರೆಯ ಮೂಲಸೌಕರ್ಯ ವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದು, ಜಿಲ್ಲಾಸ್ಪತ್ರೆಯ ಹಳೆಯ ತುರ್ತು ಚಿಕಿತ್ಸಾ ವಿಭಾಗ ತೆರವುಗೊಳಿಸಿ ಸುಮಾರು ರೂ. 114 ಕೋಟಿ ವೆಚ್ಚದಲ್ಲಿ 180 ಹಾಸಿಗೆಗಳ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ರೂ. 5 ಕೋಟಿ ವೆಚ್ಚದ ‘ಕ್ರಿಟಿಕಲ್ ಕೇರ್ ಬ್ಲಾಕ್’ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ಮೂರು ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಾದರಿಯಲ್ಲಿಯೇ ರೂ. 1.05 ಕೋಟಿ ವೆಚ್ಚದಲ್ಲಿ ‘ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೊರೇಟರಿ’ ಸ್ಥಾಪಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಎಚ್‍ಡಿಎಫ್‍ಸಿ ಬ್ಯಾಂಕ್ ಸಿ.ಎಸ್.ಆರ್ ನಿಧಿಯಡಿ 100 ಫೌಲರ್ಸ್ ಕಾಟ್‍ಗಳು, ಬೆಡ್ ಸೈಡ್ ಲಾಕರ್‍ಗಳು, ತಲಾ 10 ಸಂಖ್ಯೆಯ ಸಿ-ಪ್ಯಾಪ್ ಯಂತ್ರಗಳು, ಮಾನಿಟರ್‍ಗಳು, ಇಸಿಜಿ ಯಂತ್ರಗಳು, ಬೇಬಿ ವಾರ್ಮರ್ ಹಾಗೂ ಫೋಟೋಥೆರಪಿ ಹಾಗೂ ರೂ. 28 ಲಕ್ಷ ಮೌಲ್ಯದ ತಲಾ ಎರಡು ಅತ್ಯಾಧುನಿಕ ಅರಿವಳಿಕೆ ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ನೀಡಿದೆ. ಶೀಘ್ರವೇ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ ತಿಳಿಸಿದರು.

ಆಧುನಿಕ ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೌಲಭ್ಯ:  ರೂ.30 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಉಪಕರಣಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಲ್ಯಾಬ್‍ನಲ್ಲಿ ಒಂದೇ ಬಾರಿಗೆ 240 ರಿಂದ 400 ಟೆಸ್ಟ್‍ಗಳನ್ನು ನಡೆಸಬಹುದು. ಕಿಡ್ನಿ, ಲಿವರ್ ಹಾಗೂ ಹೃದಯ ಸಂಬಂಧಿ ಪರೀಕ್ಷೆಗಳ ವರದಿಗಳು ಇನ್ನೂ ಮುಂದೆ ಅತ್ಯಂತ ವೇಗವಾಗಿ ರೋಗಿಗಳಿಗೆ ತಲುಪಿಸಲಾಗುವುದು. ರೂ.50 ಲಕ್ಷ ವೆಚ್ಚದಲ್ಲಿ ಉದರದರ್ಶಕ (ಎಂಡೋಸ್ಕೋಪಿ) ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು ಅನ್ನನಾಳ ಮತ್ತು ಗುದದ್ವಾರದ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಿದ್ದು, ಈಗಾಗಲೇ 112 ತಪಾಸಣೆಗಳನ್ನು ಮಾಡಲಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಮೆಮೊಗ್ರಫಿ ಸೌಲಭ್ಯವನ್ನು ಅಳವಡಿಸಲಾಗಿದೆ. ಹಲ್ಲಿನ ಚಿಕಿತ್ಸೆಗಾಗಿ 360 ಡಿಗ್ರಿಯಲ್ಲಿ ಚಿತ್ರೀಕರಿಸುವ ಅತ್ಯಾಧುನಿಕ ಒಪಿಜಿ  ಎಕ್ಸ್-ರೇ ಯಂತ್ರವನ್ನು ರೂ.15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದು, ಹೊಸ ಡೆಂಟಲ್ ಚೇರ್‍ಗಳನ್ನೂ ಸಹ ಒದಗಿಸಲಾಗಿದೆ ಎಂದರು.

ಜಿಲ್ಲಾಸ್ಪತ್ರೆ ನವೀಕರಣ: ಜಿಲ್ಲಾಸ್ಪತ್ರೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸುಂದರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣ ಕಾರ್ಯ ನಡೆಯುತ್ತಿದ್ದು, ವಾರ್ಡ್‍ಗಳಿಗೆ ಬಣ್ಣ ಬಳಿಯುವುದು, ಬ್ಲಡ್ ಬ್ಯಾಂಕ್ ನವೀಕರಣ ಹಾಗೂ ಒಪಿಡಿ ಬ್ಲಾಕ್ ಹೊರಗಡೆ ನೋಂದಣಿ ಕೌಂಟರ್ ಸ್ಥಾಪಿಸುವ ಕಾರ್ಯಗಳು ಪ್ರಗತಿಯಲ್ಲಿವೆ. ಹೊರರೋಗಿ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸಿಎಸ್‍ಆರ್ ನಿಧಿಯಡಿ ರೂ.7 ಲಕ್ಷ ವೆಚ್ಚದಲ್ಲಿ 50 ರಿಂದ 100 ಜನ ಕುಳಿತುಕೊಳ್ಳಬಹುದಾದ ವಿಶಾಲವಾದ ತಂಗುದಾಣ ನಿರ್ಮಿಸಲಾಗಿದ್ದು, ಇದು ಮಳೆ ಮತ್ತು ಬೇಸಿಗೆ ಕಾಲದಲ್ಲಿ ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಪಡೆಯಲು ಸಹಕಾರಿಯಾಗಿದೆ. ಇದರೊಂದಿಗೆ ಮೃತದೇಹಗಳನ್ನು ಸಂರಕ್ಷಿಸಿಡಲು ಸಂಸದರ ನಿಧಿಯಡಿ ರೂ. 10 ಲಕ್ಷ ವೆಚ್ಚದಲ್ಲಿ ಹೊಸದಾಗಿ ನಾಲ್ಕು ‘ಹೈ ಕೋಲ್ಡ್ ಬಾಕ್ಸ್’ಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆಯ ಸ್ವಚ್ಛತೆಗೆ ಪೂರಕವಾಗಿ ಲಾಂಡ್ರಿ ವಿಭಾಗಕ್ಕೆ ಹೊಸದಾಗಿ ಒಂದು ಟಂಬಲ್ ಡ್ರೈಯರ್ ಹಾಗೂ ಮೂರು ಸೆಮಿ ಡ್ರೈಯರ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೆಟ್ಟು ಹೋಗಿದ್ದ ಐರನ್ ಮೆಷಿನ್ ಅನ್ನು ಸಹ ದುರಸ್ತಿಗೊಳಿಸಿಲಾಗಿದೆ ಎಂದರು.

ತಾಯಿ ಮತ್ತು ಮಕ್ಕಳ ಆರೈಕೆಗೆ ವಿಶೇಷ ಒತ್ತು: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೊಠಡಿ, ಆಪರೇಷನ್ ಥಿಯೇಟರ್, ನವಜಾತ ಶಿಶುಗಳ ನಿಗಾ ಘಟಕ ಹಾಗೂ ಹೈ-ರಿಸ್ಕ್ ಗರ್ಭಿಣಿಯರ ಆರೈಕೆಗಾಗಿ ವಿಶೇಷ ವಾರ್ಡ್‍ಗಳನ್ನು ಸಜ್ಜುಗೊಳಿಸಲಾಗಿದೆ. ಅಪೌಷ್ಟಿಕ ಮಕ್ಕಳ ಚಿಕಿತ್ಸೆಗಾಗಿ ಎನ್‍ಆರ್‍ಸಿ ಕೇಂದ್ರ ಹಾಗೂ ಮಕ್ಕಳಲ್ಲಿನ ಜನ್ಮಜಾತ ದೋಷಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಲು ಜಿಲ್ಲಾ ಮುಂಚಿತ ಹಸ್ತಕ್ಷೇಪ ಕೇಂದ್ರ (DEIC)  ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. 3,060 ಮಕ್ಕಳಿಗೆ ಆರಂಭಿಕ ರೋಗನಿರ್ಣಯ ಮಾಡಲಾಗಿದೆ. ದೃಷ್ಟಿ ದೋಷ, ಶ್ರವಣ ದೋಷ ಹಾಗೂ ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ 206 ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.

ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ವಾರಕ್ಕೊಮ್ಮೆ ಕರೆಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನರರೋಗ ತಜ್ಞರು ಪ್ರತಿ ಶುಕ್ರವಾರ, ಹೃದ್ರೋಗ ತಜ್ಞರು ಪ್ರತಿ ಗುರುವಾರ, ಮೂತ್ರಪಿಂಡ ತಜ್ಞರು ಪ್ರತಿ ಶನಿವಾರ ಹಾಗೂ ಮಕ್ಕಳ ಹೃದ್ರೋಗ ತಜ್ಞರು ಪ್ರತಿ ತಿಂಗಳ ಮೊದಲ ಬುಧವಾರದಂದು ಲಭ್ಯವಿರುತ್ತಾರೆ. ಅಲ್ಲದೆ, ಕ್ಯಾನ್ಸರ್ ತಜ್ಞರು ವಾರಕ್ಕೆ ಮೂರು ದಿನ ಲಭ್ಯವಿದ್ದು ಶಸ್ತ್ರ ಚಿಕಿತ್ಸೆ ಹಾಗೂ ಕೀಮೋಥೆರಪಿ ಸಲಹೆಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ನಮ್ಮ ಪ್ರಮುಖ ಗುರಿ ಎಂದರು.

ವೈದ್ಯಕೀಯ ಕಾಲೇಜು ಸೇವೆ ಲಭ್ಯ:  ಜಿಲ್ಲಾಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆ ಸಿಬ್ಬಂದಿ ಕೊರತೆ ನೀಗಿದೆ. ವಿವಿಧ ವಿಭಾಗಗಳಿಗೆ 30 ಹೊಸ ವೈದ್ಯರು, 30 ನುರಿತ ಶುಶ್ರೂಷಾಧಿಕಾರಿಗಳು ಹಾಗೂ 14 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ದೊರೆಯುತ್ತಿದೆ. ಒಂದೇ ಕೊಠಡಿಯಲ್ಲಿ ಮೂವರು ವೈದ್ಯರು ಏಕಕಾಲಕ್ಕೆ ರೋಗಿಗಳನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಪಾರ್ಟಿಷನ್ ಮಾಡಲಾಗಿದ್ದು, ಟೈಲ್ಸ್ ಅಳವಡಿಸಿ ಸುಂದರಗೊಳಿಸಲಾಗಿದೆ. ಇದರಿಂದ ಜನರಲ್ ಸರ್ಜರಿ, ಆರ್ಥೋಪೆಡಿಕ್, ಚರ್ಮದ ವಿಭಾಗ, ಇಎನ್‍ಟಿ, ಫಿಸಿಯೋಥೆರಪಿ ಹಾಗೂ ಮೆದುಳು ಸಂಬಂಧಿ ವಿಭಾಗಗಳಲ್ಲಿ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ದೊರೆಯಲಿದೆ ಎಂದರು.

ಕಳೆದ 2025-26ನೇ ಸಾಲಿನ ಅಂಕಿ-ಅಂಶಗಳ ಮಾಹಿತಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕರು, ಆಸ್ಪತ್ರೆಯಲ್ಲಿ 3,96,997 ಹೊರರೋಗಿಗಳು ಹಾಗೂ 49,682 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 11,343 ಎಂಆರ್‍ಐ ಮತ್ತು 6,632 ಸಿಟಿ ಸ್ಕ್ಯಾನ್ ಪರೀಕ್ಷೆಗಳನ್ನು ನಡೆಸಲಾಗಿದೆ. ಹೆರಿಗೆ ವಿಭಾಗದಲ್ಲಿ 1,734 ಸಹಜ ಹೆರಿಗೆ ಹಾಗೂ 4,225 ಸಿಸೇರಿಯನ್ ಶಸ್ತ್ರ ಚಿಕಿತ್ಸೆಗಳಾಗಿವೆ. ಇನ್ನುಳಿದಂತೆ 1,196 ಮೇಜರ್ ಸರ್ಜರಿ, 971 ಮೂಳೆ ಶಸ್ತ್ರಚಿಕಿತ್ಸೆ ಹಾಗೂ 1,944 ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. 64 ರಕ್ತದಾನ ಶಿಬಿರಗಳ ಮೂಲಕ 4,508 ಯೂನಿಟ್ ರಕ್ತ ಸಂಗ್ರಹಿಸಿ, 4,667 ಮಂದಿಗೆ ವಿತರಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ 110 ರೋಗಿಗಳಿಗೆ ಕಳೆದ ಸಾಲಿನಲ್ಲಿ ಸುಮಾರು 10,619 ಸೈಕಲ್‍ಗಳಷ್ಟು ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎಂಆರ್‍ಐ ಅಥವಾ ಸ್ಕ್ಯಾನಿಂಗ್‍ಗಾಗಿ ರೋಗಿಗಳು ದಿನಗಟ್ಟಲೆ ಕಾಯಬೇಕಿತ್ತು. ಆದರೆ ಈಗ ವ್ಯವಸ್ಥೆ ಸುಧಾರಿಸಿದ್ದು, ನೋಂದಾಯಿತ ದಿನವೇ ಸ್ಕ್ಯಾನಿಂಗ್ ಸೌಲಭ್ಯ ದೊರೆಯುತ್ತಿದೆ. ಕಳೆದ ಸಾಲಿನಲ್ಲಿ ಪ್ರಯೋಗಾಲಯದಲ್ಲಿ ಒಟ್ಟು 9,80,412 ಪರೀಕ್ಷೆಗಳನ್ನು ನಡೆಸಲಾಗಿದೆ. ಹೊರರೋಗಿ ವಿಭಾಗದಲ್ಲಿ 2,67,438 ಜನ ಚಿಕಿತ್ಸೆ ಪಡೆದಿದ್ದು, ಅದರಲ್ಲಿ 97,918 ಜನ ರಾತ್ರಿ ವೇಳೆಯಲ್ಲಿ ತುರ್ತು ಸೇವೆ ಪಡೆದಿದ್ದಾರೆ. ಹಾವು ಕಡಿತದ 658 ಪ್ರಕರಣಗಳಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ 656 ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ವತಿಯಿಂದ ರೂ.8 ಲಕ್ಷ ವೆಚ್ಚದಲ್ಲಿ ನೀಡಲಾಗಿರುವ ‘ಬೆರಾ’ ಪರೀಕ್ಷಾ ಯಂತ್ರವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ಇದು ಶಿಶುಗಳಲ್ಲಿನ ಕಿವುಡುತನ ಪತ್ತೆಹಚ್ಚಲು ಸಹಕಾರಿಯಾಗಲಿದ್ದು, ಆಸ್ಪತ್ರೆಯಲ್ಲಿ ಸೌಂಡ್ ಪ್ರೂಫ್ ಕೊಠಡಿಯನ್ನೂ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಹೇಳಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon