ಬೆಂಗಳೂರು: ಮಹಿಳೆಯರೊಂದಿಗಿನ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಹೊಸ ಹುದ್ದೆ ನೇಮಕ ಮಾಡಲಾಗಿದೆ.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಪೊಲೀಸ್ ಮ್ಯಾನುಯೆಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿ ಈ ಹುದ್ದೆಗೆ ರಾಮಚಂದ್ರರಾವ್ ಅವರನ್ನು ನೇಮಕ ಮಾಡಲಾಗಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳಡಿ ರಾಮಚಂದ್ರರಾವ್ ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ.
ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್ ಅನುಚಿತ ವರ್ತನೆ ಕುರಿತಾದ ವಿಡಿಯೋಗಳು ವೈರಲ್ ಆಗಿದ್ದು, ಅವು ಅಸಲಿ ಎಂದು ವರದಿ ಬಂದಿದ್ದರೂ ರಾಮಚಂದ್ರರಾವ್ ಅವರ ಅಮಾನತು ಆದೇಶ ಹಿಂಪಡೆದುಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಲೈಂಗಿಕ ನಡವಳಿಕೆ ತೋರಿದ ಆರೋಪಕ್ಕೆ ರಾಮಚಂದ್ರರಾವ್ ಗುರಿಯಾಗಿದ್ದರು. ಕಳೆದ ಜನವರಿಯಲ್ಲಿ ವಿಡಿಯೋಗಳು ಬಹಿರಂಗವಾಗಿ ಅವರನ್ನು ಜನವರಿ 19ರಂದು ಅಮಾನತುಗೊಳಿಸಿ ಸರ್ಕಾರ ಆದೇಶಿಸಿತ್ತು. ಐದು ತಿಂಗಳ ನಂತರ ಅಮಾನತು ಆದೇಶ ಹಿಂಪಡೆದ ಸರ್ಕಾರ ಪೊಲೀಸ್ ನಿಯಮಾವಳಿ ಡಿಜಿಪಿಯಾಗಿ ನೇಮಕ ಮಾಡಿದೆ. ಹಗರಣ ಬೆಳಕಿಗೆ ಬಂದಾಗ ತಮ್ಮ ಮೇಲಿನ ಆರೋಪಗಳನ್ನು ರಾಮಚಂದ್ರರಾವ್ ನಿರಾಕರಿಸಿದ್ದರು. ಸರ್ಕಾರ ಸಮಿತಿ ರಚಿಸಿದ್ದು, ವಿಡಿಯೋ ಅಸಲಿ ಎಂದು ಸಮಿತಿ ವರದಿ ನೀಡಿತ್ತು. ವರದಿ ಆಧರಿಸಿ ವಿಚಾರಣೆ ನಡೆಸುವ ಬಗ್ಗೆ ಸರ್ಕಾರ ಚಿಂತಿಸಿತ್ತು. ಆದರೆ ಈ ಕುರಿತಾಗಿ ತೀರ್ಮಾನ ಕೈಗೊಳ್ಳದೆ ರಾಮಚಂದ್ರರಾವ್ ಅವರ ಅಮಾನತು ಆದೇಶ ರದ್ದು ಮಾಡಿ ಹೊಸ ಹುದ್ದೆಗೆ ನೇಮಕ ಮಾಡಲಾಗಿದೆ. ಇದೇ ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿರುವ ರಾಮಚಂದ್ರರಾವ್ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
































