ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ)ಪಕ್ಷದ ಸರ್ಕಾರ ರಚನೆ ಹಾದಿ ಸುಗಮವಾಗಿದೆ. ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲದ ಬೆನ್ನಲ್ಲೇ ಇದೀಗ ಎಡಪಕ್ಷಗಳು ಹಾಗೂ ವಿಸಿಕೆ ಪಕ್ಷಗಳ ಬೆಂಬಲದ ಮೂಲಕ ವಿಜಯ್ ಸರ್ಕಾರ ರಚನೆಗೆ ಮುಂದಾಗಿದ್ದು, ಅಗತ್ಯ ಶಾಸಕರ ಬೆಂಬಲವನ್ನು ಪಡೆದಿದ್ದಾರೆ.
ತಮಿಳುನಾಡಿನಲ್ಲಿ ದಳಪತಿ ವಿಜಯ್ ಸರ್ಕಾರ ರಚಿಸುವುದು ಖಚಿತವಾಗಿದೆ. ಸರ್ಕಾರ ರಚನೆಗೆ ಬೇಕಾದ 118 ಶಾಸಕರ ಬೆಂಬಲವನ್ನು ವಿಜಯ್ ಪಡೆದುಕೊಂಡಿದ್ದು, ಇಂದು ಸಂಜೆ 118 ಶಾಸಕರ ಸಹಿ ಇರುವ ಪಟ್ಟಿಯೊಂದಿಗೆ ಮತ್ತೊಮ್ಮೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಭೇಟಿ ವೇಳೆ ಸರ್ಕಾರ ರಚನೆಗೆ ಮತ್ತೆ ಹಕ್ಕು ಮಂಡಿಸಲಿದ್ದಾರೆ.
ತಮಿಳುನಾಡಿನ 234 ಕ್ಷೇತ್ರಗಳ ಪೈಕಿ 108 ಕ್ಷೇತ್ರಗಳಲ್ಲಿ ವಿಜಯ್ ಅವರ ಟಿವಿಕೆ ಗೆದ್ದಿದ್ದು, ಪೆರಂಬೂರು, ತಿರುಚ್ಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ವಿಜಯ್ ಗೆದ್ದಿರುವುದರಿಂದ ಶಾಸಕರ ಎಣಿಕೆ ವೇಳೆ ಒಂದು ಕ್ಷೇತ್ರ ಮಾತ್ರ ಪರಿಗಣಿಸಲಾಗುತ್ತದೆ. ಹಾಗಾಗಿ ಟಿವಿಕೆ ಸ್ಥಾನಗಳ ಸಂಖ್ಯೆ 107. ಕಾಂಗ್ರೆಸ್ ಸಂಖ್ಯೆ 5, ವಿಸಿಕೆ 2, ಸಿಪಿಐ 2 ಹಾಗೂ ಸಿಪಿಐ(ಎಂ) 2 ಸ್ಥಾನ ಸೇರಿ ಒಟ್ಟು 118 ಸ್ಥಾನ ಪಡೆದಿರುವ ವಿಜಯ್ ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ಹೊಂದಿಸಿದ್ದಾರೆ.




























