ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2026) ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎರಡು ಕೃಪಾಂಕಗಳನ್ನು (Grace Marks) ಘೋಷಣೆ ಮಾಡಿದೆ.
ಏಪ್ರಿಲ್ 23 ಮತ್ತು 24, 2026 ರಂದು ನಡೆದ ಸಿಇಟಿ ಪರೀಕ್ಷೆಗೆ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯಗಳಲ್ಲಿ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ. ಜೀವಶಾಸ್ತ್ರ (Biology) ಈ ವಿಷಯದಲ್ಲಿ ಒಂದು ಪ್ರಶ್ನೆಗೆ ಎರಡು ಪರ್ಯಾಯ ಉತ್ತರಗಳನ್ನು (Options) ಸರಿ ಎಂದು ಪರಿಗಣಿಸಲಾಗಿದೆ.
ಗಣಿತಶಾಸ್ತ್ರ (Mathematics) ಗಣಿತ ವಿಷಯದ ಸರಿ ಉತ್ತರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಏಪ್ರಿಲ್ 26ರಂದು ಕೆಇಎ ತಾತ್ಕಾಲಿಕ ಸರಿ ಉತ್ತರಗಳನ್ನು (Provisional Answer Key) ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಈ ಆಕ್ಷೇಪಣೆಗಳನ್ನು ಪರಿಶೀಲಿಸಿದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈಗ ಸರಿ ಉತ್ತರಗಳನ್ನು ಪರಿಷ್ಕರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಕೃಪಾಂಕದ ಲಾಭ ಸಿಗಲಿದೆ.






























