ಕಡಿಮೆ ಮಳೆ ಮುನ್ಸೂಚನೆ: ಪರ್ಯಾಯ ಬೆಳೆ ಆಶ್ರಯಿಸಲು ರೈತರಿಗೆ ಕೃಷಿ ಇಲಾಖೆ ಸಲಹೆ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪೆಸಿಫಿಕ್ ಮಹಾಸಾಗರದ ಮೇಲ್ಮೆ ತಾಪಮಾನ ಹೆಚ್ಚಳದಿಂದಾಗಿ ‘ಎಲ್ ನಿನೋ’ ಪ್ರಭಾವ ಉಂಟಾಗಿದ್ದು, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದಾಗಿ ಕೋಟೆ ನಾಡಿನ ಕೃಷಿ ವಲಯದಲ್ಲಿ ಆತಂಕ ಮೂಡಿದ್ದು, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರೈತರು ಸೂಕ್ತ ಬೆಳೆ ಹಾಗೂ ತಳಿಗಳನ್ನು ಆಯ್ಕೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಕೋರಿದ್ದಾರೆ.

ಮಳೆ ಅಭಾವದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಬಿತ್ತನೆ, ಮಣ್ಣಿನಲ್ಲಿ ತೇವಾಂಶ ಸಂರಕ್ಷಣೆ ಮತ್ತು ಮಧ್ಯಂತರ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಬೆಳೆ ಹಾನಿಯನ್ನು ತಡೆದು ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.

ಎಲ್ ನಿನೋ ಸಂದರ್ಭದಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳು: ಕನಿಷ್ಠ 10 ಮಿ.ಮೀ ನಿಂದ 20 ಮಿ.ಮೀ ಗಿಂತ ಹೆಚ್ಚಿನ ಮಳೆ ನಿರಂತರವಾಗಿ 2 ರಿಂದ 3 ದಿನ ಬರುವ ವಾತಾವರಣ ಇದ್ದಾಗ, ಹೆಚ್ಚು ತೇವಾಂಶ ಬೇಡುವ ಮುಸುಕಿನಜೋಳದ ಬದಲಾಗಿ ತೊಗರಿ, ರಾಗಿ, ಸಾಮೆ, ನವಣೆ, ಸಜ್ಜೆ ಮುಂತಾದ ಕಡಿಮೆ ನೀರು ಬೇಡುವ ಬೆಳೆಗಳನ್ನು ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ ಹೆಚ್ಚಿನ ಅಂತರ ಕಾಯ್ದುಕೊಳ್ಳಬೇಕು. ಎರಡು ಸಾಲುಗಳ ನಡುವೆ ಒಂದು ಸಾಲನ್ನು ಖಾಲಿ ಬಿಡುವ ವಿಧಾನ ಹಾಗೂ ಏರು ಮಡಿ ಪದ್ಧತಿಯನ್ನು ಅನುಸರಿಸಬೇಕು. ಕಡ್ಡಾಯವಾಗಿ ರಾಗಿ-ತೊಗರಿ (8:2), ರಾಗಿ-ಅಲಸಂದೆ/ಹೆಸರು (8:2), ಶೇಂಗಾ-ತೊಗರಿ (8:2), ಅಥವಾ ರಾಗಿ-ಸಾಮೆ/ಸಿರಿಧಾನ್ಯಗಳು (8:2) ಅಂತರ ಬೆಳೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆರ್ಥಿಕ ನಷ್ಟದಿಂದ ಪಾರಾಗಬಹುದು.

ಬಿತ್ತನೆಗೆ ಮುನ್ನ ಬೀಜಗಳನ್ನು ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 18 ಗಂಟೆಗಳ ಕಾಲ ನೆನೆಸಿ, ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡುವುದರಿಂದ ಮೊಳಕೆ ಶಕ್ತಿ ಮತ್ತು ಬರ ತಡೆದುಕೊಳ್ಳುವ ಸಾಮಥ್ರ್ಯ ಹೆಚ್ಚುತ್ತದೆ. ಕಳೆಗಳನ್ನು ನಿಯಂತ್ರಿಸಲು ನಿರಂತರವಾಗಿ ಅಂತರ ಬೇಸಾಯ ಮಾಡಬೇಕು. ಕೃಷಿ ತ್ಯಾಜ್ಯಗಳನ್ನು ಮಣ್ಣಿಗೆ ಹೊದಿಕೆಯಾಗಿ ಬಳಸಬೇಕು ಹಾಗೂ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ.

ಮಧ್ಯಂತರ ಬರ ಪರಿಸ್ಥಿತಿ ಎದುರಾದಾಗ ಬೆಳೆ ಚೇತರಿಕೆಗೆ 1 ರಿಂದ 3% ಯೂರಿಯಾವನ್ನು 0.5% ಜಿಂಕ್ ಸಲ್ಫೇಟ್‍ನೊಂದಿಗೆ ಅಥವಾ ಪ್ರತ್ಯೇಕವಾಗಿ ಸಿಂಪಡಿಸಬೇಕು. ಇದರೊಂದಿಗೆ 13-0-45 (KNO3)  ದ್ರಾವಣದ ಸಿಂಪಡಣೆ ಹಾಗೂ ಹೈಡ್ರೋಜೆಲ್ ಬಳಕೆಯಿಂದ ಮಣ್ಣಿನ ತೇವಾಂಶ ಕಾಪಾಡಬಹುದು.

ಬೆಳೆಗಳಿಗೆ ರಾಗಿ ತಳಿಗಳಾದ GPU-28, KMR-316, GPU-66, GPU-48, MR-1, MR-6, INDAF-7 ಮತ್ತು 9 ಬಳಸುವುದು ಉತ್ತಮ. ಶೇಂಗಾ ಬೆಳೆಯಲ್ಲಿ K-6  ತಳಿ ಸೂಕ್ತವಾಗಿದ್ದು, ತೊಗರಿಯಲ್ಲಿ GRG-152, TS-3-R  ಉತ್ತಮವಾಗಿವೆ. ಮಳೆ ತಡವಾದಲ್ಲಿ ಕಡಿಮೆ ಅವಧಿಯ ತೊಗರಿ ತಳಿಗಳಾದ ICPV-21333 ಮತ್ತು ICPLL-22333  ಬಳಸಬಹುದು ಹಾಗೂ ಮಳೆ ಬಹಳ ವಿಳಂಬವಾದರೆ ರಾಗಿ, ಹುರುಳಿ ಹಾಗೂ ಹಿಂಗಾರು ಕಡಲೆಯನ್ನು ಪರ್ಯಾಯ ಬೆಳೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ನೀರಿನ ಲಭ್ಯತೆ ಇರುವ ಕಡೆ ಹನಿ ಅಥವಾ ತುಂತುರು ನೀರಾವರಿ ಬಳಸಿ, ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಸಂದಿಗ್ಧ ಸಮಯದಲ್ಲಿ ನೀರುಣಿಸುವುದು ಉತ್ತಮ. ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ಸುಸ್ಥಿರ ಆದಾಯ ಸಾಧ್ಯವಿದ್ದು, ವಿಷಮ ಪರಿಸ್ಥಿತಿಯಲ್ಲಿ ನಷ್ಟ ತುಂಬಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.  ರೈತರು ಕಾಲಕಾಲಕ್ಕೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ರೇಡಿಯೋ, ಟಿವಿ, ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon