ಮಂಡ್ಯ: ಆರೋಪಿಯೊಬ್ಬನನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದ ಮಳವಳ್ಳಿ ಗ್ರಾಮಾಂತರ ಠಾಣೆ ಸಹಾಯಕ ಸಬ್‌ಇನ್‌ಸ್ಟೆಕ್ಟರ್ (ಎಎಸ್‌ಐ) ಶಿವಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಲಾಟೆ ಪ್ರಕರಣದಲ್ಲಿ ಮಳವಳ್ಳಿ ರಾಜೇಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಠಾಣೆಯಲ್ಲೇ ಜಾಮೀನು ನೀಡುವ ಮೂಲಕ ಪ್ರಕರಣ ಇತ್ಯರ್ಥಗೊಳಿಸುತ್ತೇವೆ ಎಂದು ಎಎಸ್‌ಐ ಶಿವಕುಮಾರ್ ಕರೆ ಮಾಡಿ ರಾಜೇಗೌಡ ಅವರಿಗೆ ಆಮಿಷ ಒಡ್ಡಿದ್ದರು.
ಕರೆಯನ್ನು ರೆಕಾರ್ಡ್ ಮಾಡಿದ್ದ ರಾಜೇಗೌಡ ಲೋಕಾಯುಕ್ತ ಪೊಲೀಸರಿಗೆ ಸಾಕ್ಷ್ಯ ಒದಗಿಸಿ ದೂರು ನೀಡಿದ್ದರು. ಬುಧವಾರ ರಾತ್ರಿ ಪೊಲೀಸ್ ಠಾಣೆಯಲ್ಲೇ ಲಂಚ ಪಡೆಯುವ ವೇಳೆ ಎಎಸ್‌ಐ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ಲೋಕಾಯುಕ್ತ ಎಸ್ಪಿ ಎಸ್.ಸುರೇಶಬಾಬು ನೇತೃತ್ವದಲ್ಲಿ ಡಿವೈಎಸ್ಪಿ ಸುನಿಲ್‌ಕುಮಾರ್, ಇನ್‌ಸ್ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
































