ದಾವಣಗೆರೆ: ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್ಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 4,15,000 ರೂ.ಗಳ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ನಗರದ ಶ್ರೀಮತಿ ಮಂಜುಳಾ ಕೆ.ಬಿ. ಅವರು ಕೆನರಾ ಬ್ಯಾಂಕ್ನಲ್ಲಿ ತಮ್ಮ ಮನೆಯ ಮೂಲ ದಾಖಲೆಗಳನ್ನು ಅಡಮಾನವಿಟ್ಟು 21,50,000 ರೂ.ಗಳ ಗೃಹ ಸಾಲ ಪಡೆದಿದ್ದರು. 2024 ರ ಸೆಪ್ಟೆಂಬರ್ 11 ರಂದು ಅವರು ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿ, ಸಾಲದ ಖಾತೆಯನ್ನು ರದ್ದುಗೊಳಿಸಿರುತ್ತಾರೆ. ಸಾಲ ತೀರಿಸಿದ ನಂತರ ತಮ್ಮ ಮೂಲ ದಾಖಲೆಗಳನ್ನು ಹಿಂಪಡೆಯಲು ಬ್ಯಾಂಕ್ಗೆ ಮನವಿ ಸಲ್ಲಿಸಿದಾಗ, ಬ್ಯಾಂಕ್ ಅಧಿಕಾರಿಗಳು ಸದರಿ ದಾಖಲೆಗಳು ಕಳೆದುಹೋಗಿವೆ ಎಂದು ತಿಳಿಸಿ ಕೇವಲ ದೃಢೀಕೃತ ಪ್ರತಿಗಳನ್ನು ನೀಡುವುದಾಗಿ ಹೇಳಿದ್ದರು.
ಬ್ಯಾಂಕ್ನ ಈ ಬೇಜವಾಬ್ದಾರಿತನದಿಂದ ನೊಂದ ಗ್ರಾಹಕರು, ಅಸಲು ದಾಖಲೆಗಳಿಲ್ಲದೆ ಭವಿಷ್ಯದಲ್ಲಿ ಆಸ್ತಿಯ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಹಾಗೂ ಸದಸ್ಯರಾದ ಶ್ರೀ ತ್ಯಾಗರಾಜನ್ ಸಿ.ಎಸ್. ಅವರನ್ನೊಳಗೊಂಡ ಪೀಠವು ಬ್ಯಾಂಕ್ನ ಸೇವೆಯಲ್ಲಿ ಗಂಭೀರ ಲೋಪವಿರುವುದನ್ನು ಎತ್ತಿ ಹಿಡಿದಿದೆ. ಆಯೋಗವು ಏಪ್ರಿಲ್ 21 ರಂದು ಕಳೆದುಹೋದ ಅಸಲು ದಾಖಲೆಗಳ ಬದಲಾಗಿ ದೂರುದಾರರಿಗೆ 4,00,000 ರೂ.ಗಳನ್ನು ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆ ಹಾಗೂ ದೂರಿನ ವೆಚ್ಚಕ್ಕಾಗಿ ಹೆಚ್ಚುವರಿ 15,000 ರೂ.ಗಳನ್ನು ನೀಡಬೇಕು. ಮತ್ತು ಆದೇಶ ಹೊರಬಂದ ಒಂದು ತಿಂಗಳ ಒಳಗಾಗಿ ಈ ಒಟ್ಟು ಮೊತ್ತವನ್ನು ದೂರುದಾರರಿಗೆ ಪಾವತಿಸಲು ಬ್ಯಾಂಕ್ಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಪದ್ಮ ಪಿ.ಎಸ್ ರವರು ತಿಳಿಸಿದ್ದಾರೆ.
































