ಚಿತ್ರದುರ್ಗ: ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಂಜನೇಯ ಬೆಂಬಲಿಗರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ.ಪಂ. ಮಾಜಿ ಸದಸ್ಯ ನರಸಿಂಹರಾಜು ಹಾಗೂ ತಾ.ಪಂ. ಮಾಜಿ ಸದಸ್ಯ ಸಮರ್ಥ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಿ.ಪಂ. ಮಾಜಿ ಸದಸ್ಯ ನರಸಿಂಹರಾಜು ಮಾತನಾಡಿ, “ಹೆಚ್.ಆಂಜನೇಯ ಅವರು ಮಾಸ್ ಮತ್ತು ಫೇಸ್ ಲೀಡರ್. ಮಾದಿಗ ಸಮಾಜದ ಪ್ರಶ್ನಾತೀತ ನಾಯಕ. ಈ ಹಿಂದೆ ಸೋತ ಅನೇಕರಿಗೆ ಸ್ಥಾನಮಾನ ನೀಡಲಾಗಿದೆ. ಡಾ.ಜಿ.ಪರಮೇಶ್ವರ್, ಆರ್.ಬಿ.ತಿಮ್ಮಾಪುರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಿದ್ದಾರೆ. ಹಾಗಾದರೆ ಆಂಜನೇಯಗೆ ಏಕೆ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಕೆ.ಎಚ್.ಮುನಿಯಪ್ಪ ಅವರಿಗೂ ಪ್ರಭಾವಿ ಖಾತೆ ನೀಡಿಲ್ಲ. ಬಲ ಸಮುದಾಯಕ್ಕೆ, ಛಲವಾದಿ ಸಮುದಾಯಕ್ಕೆ ೨ ಮಂತ್ರಿ ಸ್ಥಾನ ನೀಡಿದ್ದಾರೆ. ಆದರೆ ನಮ್ಮ ಮಾದಿಗ ಎಡ ಸಮುದಾಯಕ್ಕೆ ಕೇವಲ ಒಬ್ಬರಿಗೆ ಮಂತ್ರಿಗಿರಿ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೇ? ಬಲ ಸಮುದಾಯವನ್ನು ಓಲೈಸಿ ಮಾದಿಗ ಸಮಾಜವನ್ನು ಕಡೆಗಣಿಸಲಾಗುತ್ತಿದೆ” ಎಂದು ನರಸಿಂಹರಾಜು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಬೆಂಕಿ ಹೊತ್ತಿತ್ತು. ಆ ಸಂದರ್ಭದಲ್ಲಿ ಹೆಚ್.ಆಂಜನೇಯ ಅವರ ನೇತೃತ್ವದಲ್ಲಿ ಶಾಂತಿಯುತ ಹೋರಾಟ ನಡೆಯಿತು. ಸರ್ಕಾರ ಮತ್ತು ಮಾದಿಗ ಸಮುದಾಯದ ನಡುವೆ ಕೊಂಡಿಯಾಗಿ ಆಂಜನೇಯ ಕೆಲಸ ಮಾಡಿದ್ದಾರೆ. ಅಂತಹ ನಾಯಕನಿಗೆ ಸ್ಥಾನಮಾನ ನೀಡದೆ ಕಡೆಗಣಿಸಿದರೆ ಸಮಾಜ ಸಹಿಸುವುದಿಲ್ಲ. ನ್ಯಾಯ ನೀಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾ.ಪಂ. ಮಾಜಿ ಸದಸ್ಯ ಸಮರ್ಥ ಕಿಡಿಕಾರಿ, ಹೆಚ್.ಆಂಜನೇಯ ಅವರ ಸೋಲಿಗೆ ಕೆಲ ಕಾಂಗ್ರೆಸ್ಸಿಗರೇ ಕಾರಣ. ಆದರೆ ಸೋಲಿಗೆ ಕಾರಣರಾದವರಿಗೇ ಅಧಿಕಾರ ನೀಡಲಾಗಿದೆ. ಆಂಜನೇಯಗೆ ಸ್ಥಾನಮಾನ ನೀಡದಿದ್ದರೆ ಮಾದಿಗ ಸಮುದಾಯ ತಿರುಗಿ ಬೀಳಲಿದೆ” ಎಂದರು.
ಮಲ್ಲಿಕಾರ್ಜುನ ಖರ್ಗೆ ಎ.ಐ.ಸಿ.ಸಿ ಅಧ್ಯಕ್ಷರಾಗಿರುವವರೆಗೆ ನಮಗೆ ನ್ಯಾಯದ ಭರವಸೆ ಇಲ್ಲ. ಒಳಮೀಸಲಾತಿ ವಿಚಾರದಲ್ಲೂ ಮಾದಿಗರಿಗೆ ಅನ್ಯಾಯವಾಗಿದೆ. ಖರ್ಗೆ ಅವರಿಂದಲೇ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಸಮರ್ಥ ನೇರ ಆರೋಪ ಮಾಡಿದರು.
ಅವರು ಮಾದಿಗ ಸಮುದಾಯ ಆಂಜನೇಯ ಅವರನ್ನು ಮಂತ್ರಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲಿ ಎಂದರು.
ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿ, ಆಂಜನೇಯ ಅವರಿಗೆ ಎಂ.ಎಲ್.ಸಿ ಮಾಡಿ ಮಂತ್ರಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಬೆಂಬಲಿಗರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಮೇಶ್ ಕೋಟಿ, ರಘು, ಉಮೇಶ್, ನರಹರಿ, ತಿಪ್ಪೇಸ್ವಾಮಿ ಇತರರಿದ್ದರು.































