ಮಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ನೀಡುವ ರೀತಿಯಲ್ಲಿಯೇ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸುವುದಾಗಿ ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಪಿಎಲ್ ಕಾರ್ಡ್ ದಾರರಿಗೆ ಶೇಕಡ 70ರಷ್ಟು ಉಚಿತ ಮತ್ತು ಶೇಕಡ 30ರಷ್ಟು ವೆಚ್ಚ ಭರಿಸುವ ವ್ಯವಸ್ಥೆ ಇತ್ತು. ನಂತರದಲ್ಲಿ ಎಪಿಎಲ್ ಕಾರ್ಡ್ ದಾರರು ಶೇಕಡ 70ರಷ್ಟು ಶುಲ್ಕ ಭರಿಸುವ ನಿಯಮ ಬಂದಿದೆ. ಹೀಗಾಗಿ ಬಿಪಿಎಲ್ ನವರ ರೀತಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಚಿಕಿತ್ಸೆ ಸಿಗುವಂತೆ ಮಾಡಲು ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಆರೋಗ್ಯ ಮಿತ್ರರನ್ನು ಜನರ ಸೇವೆಗಾಗಿ ನೇಮಿಸಲಾಗಿದೆ. ಆಸ್ಪತ್ರೆಗಳ ಹಿತ ಕಾಯಲು ಅಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವಾಗ ಬಿಪಿಎಲ್ ಕಾರ್ಡ್ ದಾರರು ಯಾವುದೇ ಹಣ ನೀಡುವ ಅಗತ್ಯವಿಲ್ಲ. ಒಂದು ವೇಳೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದಲ್ಲಿ ಆಸ್ಪತ್ರೆಯ ಆರೋಗ್ಯ ಮಿತ್ರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
































