ಬೆಂಗಳೂರು: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ರಾಜ್ಯ ಸರ್ಕಾರ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದ್ದು, ಬುಧವಾರದಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗುವುದು ಖಚಿತವಾಗಿದೆ.
ಮುಷ್ಕರದಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಇದಕ್ಕೆ ಸಂಘಟನೆಗಳು ಬಗ್ಗದ ಕಾರಣ ಮೇ 20ರಿಂದ ಮುಷ್ಕರ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಂಟಿ ಕ್ರಿಯಾ ಸಮಿತಿ ಬುಧವಾರ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಸರ್ಕಾರದಿಂದ ನಡೆಸಲಾದ ಮತ್ತೊಂದು ಸುತ್ತಿನ ಸಂಧಾನ ಸಭೆ ಫಲಪ್ರದವಾಗಿಲ್ಲ.
ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ಮೇ 20ರಿಂದ ಕರೆ ನೀಡಿರುವ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ನೌಕರರ ಸಂಘಟನೆ ಹೇಳಿದೆ.
ಸಾರಿಗೆ ನೌಕರರ ಹಲವು ಸಂಘಟನೆಗಳ ಒಕ್ಕೂಟವಾಗಿರುವ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕ ಭವನದಲ್ಲಿ ಇಲಾಖೆಯ ಆಯುಕ್ತ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆಯ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು. ಆದರೆ ಸಮಿತಿ ಪದಾಧಿಕಾರಿಗಳ ಮನವೊಲಿಸುವಲ್ಲಿ ಸಭೆ ವಿಫಲವಾಗಿದೆ.






























