ಚಿತ್ರದುರ್ಗ : ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರಕ್ಕೆ ಕೊಡುಗೆ ನೀಡಬೇಕೆಂದು ಮಹಿಳಾ ಠಾಣೆ ಪೊಲಿಸ್ ಇನ್ಸ್ಪೆಕ್ಟರ್ ನಯಿಂ ಅಹಮದ್ ಜನತೆಗೆ ಕರೆ ನೀಡಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಮಲ್ಲಯ್ಯ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ ತಿಂಗಳಿಗೆ ಮಾತ್ರ ಮೀಸಲಾಗಬಾರದು. ಪರಿಸರ ಹಚ್ಚ ಹಸಿರಿನಿಂದ ಕೂಡಿರಬೇಕಾದರೆ ಯುವ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕಿದೆ. ಗಿಡ ನೆಡುವುದು ಮುಖ್ಯವಲ್ಲ. ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದಾಗ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದು. ಗಿಡ-ಮರಗಳನ್ನು ಕಡಿದು ನಾಶ ಪಡಿಸುವುದರಿಂದ ಉಸಿರಾಟಕ್ಕೆ ಶುದ್ದ ಗಾಳಿಯಿಲ್ಲದೆ ಮಾನವ ತೊಂದರೆ ಅನುಭವಿಸಬೇಕಾಗುತ್ತದೆಂದು ಹೇಳಿದರು.
ಬಡಾವಣೆ ಠಾಣೆಯ ಸಬ್ಇನ್ಸ್ಪೆಕ್ಟರ್ ರಘು ಟಿ, ಸಿಬ್ಬಂದಿಗಳಾದ ರಂಗನಾಥ್ ಟಿ, ದೇವೇಂದ್ರಪ್ಪ, ರಾಕೇಶ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.































