ಶಿವಮೊಗ್ಗ: ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಅಡಿಕೆ ಮತ್ತು ತೆಂಗಿನ ತೋಟಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭದ್ರಾ ಜಲಾಶಯದಿಂದ ಇಂದಿನಿಂದ (ಸೋಮವಾರ) ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಮುಂದಿನ 10 ದಿನಗಳ ಕಾಲ ಪ್ರತಿನಿತ್ಯ ಸುಮಾರು 1,500 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.
ಭಾನುವಾರ ಸರ್ಕಾರಿ ರಜೆ ಇದ್ದ ಕಾರಣ ನೀರು ಬಿಡುಗಡೆಯ ಅಧಿಕೃತ ಆದೇಶವನ್ನು ಇಂದು ಪ್ರಕಟಿಸಲಾಗಿದೆ. ತೋಟಗಾರಿಕಾ ಬೆಳೆಗಳ ಉಳಿವಿಗಾಗಿ ರೈತರು ಕಳೆದ ಕೆಲವು ದಿನಗಳಿಂದ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದರು. ಇದೀಗ ಅಧಿಕೃತ ಆದೇಶ ಹೊರಬಿದ್ದಿದ್ದು, ತಕ್ಷಣದಿಂದಲೇ ನಾಲೆಗಳಿಗೆ ನೀರು ಹರಿಯಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಶಿವಮೊಗ್ಗದಲ್ಲಿ ಮಾಹಿತಿ ನೀಡಿದ್ದಾರೆ.