ಬೆಂಗಳೂರು: ಇಲಾಖೆಯಲ್ಲಿ ಖಾಲಿ ಇರುವ 4,000 ಹುದ್ದೆಗಳ ಭರ್ತಿಗೆ ತಕ್ಷಣವೇ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಜೂರಾದ ಇಲಾಖೆಯಲ್ಲಿ 25,540 ಹುದ್ದೆಗಳಿದ್ದು, 8770, ಖಾಲಿ ಇವೆ. ಎ-ವೃಂದದ 268 ಬಿ-ವೃಂದ 1,079 ಸಿ-ವೃಂದದ 5,294, ಡಿ-ವೃಂದದ 2,129 ಖಾಲಿ ಹುದ್ದೆಗಳಲ್ಲಿ ಮೊದಲ ಹಂತದಲ್ಲಿ 4 ಸಾವಿರ ಭರ್ತಿ ಮಾಡಲಾಗುತ್ತಿದೆ. ಸಿ ಮತ್ತು ಡಿ ವೃಂದದ ಹುದ್ದೆಗಳ ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಲಿದೆ ಎಂದರು.
1,400 ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮತಿ ನೀಡಲಾ ಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಹುದ್ದೆಗಳ ಭರ್ತಿಗೂ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಮಳೆ ವಿಳಂಬವಾದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ, ಯಾವುದೇ ಜಲಮೂಲಗಳಿಂದ ಕಲುಷಿತ ನೀರು ಪೂರೈಕೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ. ತುರ್ತು ಬಳಕೆಗೆ ₹117 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದವರಿಗೆ ಖಾತಾ ವಿಳಂಬವಾ-ಗುತ್ತಿದೆ. ಸರ್ವರ್ ಸಮಸ್ಯೆ ಪರಿಹರಿಸಲು, ಎಲ್ಲ ಆಸ್ತಿಗಳ ದಾಖಲೀಕರಣ ಮಾಡಲು, ಜಿಯೊ ಟ್ಯಾಗ್ ಮಾಡಿ ಸರ್ಕಾರಿ ಅಸ್ತಿ ಸಂರಕ್ಷಣೆ ಮಾಡಲು, ಗ್ರಾಮೀಣ ಭಾಗದ ಸಾಮಾಜಿಕ ಅರಣ್ಯವನ್ನು ಆಡಿಟ್ ಮಾಡಿಸಲು, ರಸ್ತೆಗಳ ಸ್ಥಿತಿಗತಿಯ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
































