ಚಿತ್ರದುರ್ಗ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ 200 ಕೋಟಿ ರೂಪಾಯಿ ಫಂಡಿಂಗ್ ವಿಚಾರ ಬಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಚಿತ್ರದುರ್ಗದ ಹೋರಾಟಗಾರ್ತಿ ರಮಾ ನಾಗರಾಜ್ ಅವರ ಹೆಸರು ತಳಕು ಹಾಕಿಕೊಂಡಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ರಮಾ ನಾಗರಾಜ್ ಮಾಧ್ಯಮಗಳೆದುರು ಕಣ್ಣೀರಿಟ್ಟು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ರಮಾ ನಾಗರಾಜ್, ಫಂಡಿಂಗ್ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಮಾಧ್ಯಮಗಳ ಮೂಲಕವೇ ಚಿನ್ನಯ್ಯ ಬಗ್ಗೆ ನನಗೆ ತಿಳಿದಿದೆ. ವೈಯಕ್ತಿಕವಾಗಿ ಚಿನ್ನಯ್ಯ ನನಗೆ ಪರಿಚಯ ಇಲ್ಲ. ಆತನ ಪತ್ನಿ ಬಗ್ಗೆ ಗೊತ್ತಿಲ್ಲ. ಫಂಡಿಂಗ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದರು.
“ಹೋರಾಟಗಾರ್ತಿಯಾಗಿ ನಾನು ಯಾವಾಗಲೂ ನ್ಯಾಯಪರವಾಗಿ ನಿಲ್ಲುತ್ತೇನೆ. ಫಂಡಿಂಗ್ ವಿಚಾರದ ಬಗ್ಗೆ SIT ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ವಿರುದ್ಧದ ಆರೋಪಕ್ಕೆ ಕಾನೂನಿನ ಮೂಲಕವೇ ಸವಾಲೊಡ್ಡುತ್ತೇನೆ” ಎಂದು ಅವರು ಹೇಳಿದರು.
ಧರ್ಮಸ್ಥಳದ ವಿರುದ್ಧ ಹೋರಾಟವಲ್ಲ:
ತಿಮರೋಡಿ ಮಹೇಶ್, ಗಿರೀಶ್ ಮಟ್ಟೆಣ್ಣವರ್ ತಮಗೆ ಪರಿಚಿತರು ಎಂದು ಒಪ್ಪಿಕೊಂಡ ಅವರು, “ನಾವು ಧರ್ಮಸ್ಥಳ ಪ್ರಕರಣದ ವಿರುದ್ಧ ಹೋರಾಡಿದ್ದೇವೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಮ್ಮ ಹೋರಾಟ ಅಲ್ಲ. ನಮಗೆ ಧಾರ್ಮಿಕ ಸಂಸ್ಕಾರವಿದೆ. ನನ್ನ ತಾಯಿ ಧರ್ಮಸ್ಥಳದ ಭಕ್ತರು ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ಬೆನ್ನಟ್ಟಿರುವ ಪೊಲೀಸರು:
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ SIT ಈಗಾಗಲೇ 200 ಕೋಟಿ ಫಂಡಿಂಗ್ ಮೂಲದ ಬಗ್ಗೆ ತನಿಖೆ ಆರಂಭಿಸಿದೆ. ಈ ಬೆಳವಣಿಗೆಯ ಮಧ್ಯೆ ಚಿತ್ರದುರ್ಗದ ರಮಾ ನಾಗರಾಜ್ ಹೆಸರು ಪ್ರಸ್ತಾಪವಾಗಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.





























