ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ. 2023ರಲ್ಲೇ ಸಂಸತ್ನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು, ಆದರೆ ಕೇಂದ್ರ ಸರ್ಕಾರ ಇದುವರೆಗೆ ಏಕೆ ಅನುಷ್ಠಾನಕ್ಕೆ ತಂದಿಲ್ಲ? ಎಂದು ಕೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ. ಈಗ ಮಹಿಳಾ ಮೀಸಲಾತಿ ವಿಧೇಯಕ, ಕ್ಷೇತ್ರ ಮರುವಿಂಗಡಣೆ ಬಿಲ್, ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಬಿಲ್ ಈ ಮೂರನ್ನೂ ಮಿಕ್ಸ್ ಮಾಡಿದ್ದರು.ಹಾಗಾಗಿ ಸೋಲಾಗಿದೆ. ಮಹಿಳಾ ಮೀಸಲಾತಿ ವಿಧೇಯಕ ಒಂದೇ ಆಗಿದ್ದರೆ ಅಂಗೀಕಾರವಾಗುತ್ತಿತ್ತು ಎಂದು ತಿಳಿಸಿದ್ದಾರೆ.
3 ವಿಧೇಯಕ ಮಿಕ್ಸ್ ಮಾಡಿದ್ದರಿಂದ ಲೋಕಸಭೆಯಲ್ಲಿ ಬಿದ್ದೋಗಿದೆ. ಬಿಜೆಪಿಯವರು ರಾಜಕೀಯ ಆಟ ಆಡಿದ್ದಾರೆ. ರಾಜಕೀಯ ಮಾಡುವುದಕ್ಕಾಗಿ 3 ವಿಧೇಯಕ ಮಿಕ್ಸ್ ಮಾಡಿದ್ದರು. ನಾವು ಕ್ಷೇತ್ರ ಮರುವಿಂಗಡಣಾ ವಿಧೇಯಕಕ್ಕೆ ಮಾತ್ರ ವಿರೋಧಿಸಿದ್ದೇವೆ. ಮಹಿಳಾ ಮೀಸಲಾತಿ ವಿಧೇಯಕವನ್ನು ನಾವು ವಿರೋಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲಾಗಿಲ್ಲ, ಬಿಜೆಪಿಯ ಕುಟಿಲ ನೀತಿಗೆ ಸೋಲಾಗಿದೆ. ಲಕ್ಷಾಂತರ ಜನ ಕಷ್ಟಪಟ್ಟು ಸ್ವಾತಂತ್ರ್ಯ ಕೊಡಿಸಿದ ದೇಶದಲ್ಲಿ ಕುಟೀಲ ನೀತಿ ಮಾಡಿ ಅಧಿಕಾರಕ್ಕೆ ಬರಲು ಸಂಚು ರೂಪಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಲ್ ಬೆಂಬಲ ಸಿಗದಿರುವುದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಸಿಕ್ಕ ಜಯ. ಆರ್ಎಸ್ಎಸ್, ಬಿಜೆಪಿ ತಂತ್ರಗಳನ್ನು ಸೋಲಿಸಿದ್ದಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿಪಕ್ಷಗಳಿಗೆ ಧನ್ಯವಾದ ಹೇಳಬೇಕು ಎಂದರು.
2023ರಲ್ಲಿ ಪಾಸ್ ಆಗಿದ್ದ ವಿಧೇಯಕ ಯಾಕೆ ಅನುಷ್ಠಾನಕ್ಕೆ ತರಲಿಲ್ಲ. ಬಿಜೆಪಿಯವರು ಕೇವಲ ಮೊಸಳೆ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಎಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. 543 ಕ್ಷೇತ್ರಗಳಲ್ಲಿ ಮೀಸಲಾತಿ ತರಬಹುದು, ಮಾಡಲಿ ಬೆಂಬಲಿಸುತ್ತೇವೆ. ಕಾಂಗ್ರೆಸ್ನವರು ಮಹಿಳಾ ಮೀಸಲಾತಿ ವಿರೋಧಿಗಳಲ್ಲ ಎಂದು ಹೇಳಿದರು.
































