ಬೆಂಗಳೂರು: ಸ್ನೇಹಿತರ ಜೊತೆ ಖಾಸಗಿ ಕ್ಷಣ ಕಳೆಯಲು ಪತಿ ಒತ್ತಾಯ ಮಾಡ್ತಿದ್ದಾರೆ ಅಂತ ಆರೋಪ ಮಾಡಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ ವಿಕೃತ ಪತಿ ವಿರುದ್ಧ ಅಮೃತಹಳ್ಳಿ ಠಾಣೆಗೆ ಪತ್ನಿ ದೂರು ನೀಡಿದ್ದಾರೆ. ಸ್ನೇಹಿತರ ಜೊತೆಗೆ ಮಂಚವೇರುವಂತೆ ಒತ್ತಾಯಿಸಿ ಅಸಹ್ಯಕರ ಕೃತ್ಯಕ್ಕೆ ಒತ್ತಾಯ ಮಾಡ್ತಿದ್ದ ಆರೋಪ ಹಿನ್ನೆಲೆ ಪತಿ ಸುಧೀರ್ ಪೈ ಎಂಬಾತನ ಮೇಲೆ ಶ್ರೇಯಾ ಪೈ ಎಂಬಾಕೆ ದೂರು ನೀಡಿದ್ದಾರೆ. 2007ರಲ್ಲಿ ಸುಧೀರ್ ಪೈ ಎಂಬಾತನನ್ನ ಮದುವೆಯಾಗಿದ್ದ ಶ್ರೇಯಾ ದಂಪತಿಗೆ ಇಬ್ಬರು ಮಕ್ಕಳಿದ್ದು ಬೆಂಗಳೂರಿನಲ್ಲಿ ವಾಸ ಮಾಡ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ತನ್ನ ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯ ಮಾಡ್ತಿದ್ದಾರೆ ಎಂದು ಆರೋಪ ಮಾಡಿರೋ ಶ್ರೇಯಾ ಗಂಡನ ವಾಟ್ಸಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗು ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಕೊಲೆ ಮಾಡೋದಾಗಿ ಬೆದರಿಕೆ ಆರೋಪಿಸಿದ್ದಾರೆ. ತನ್ನ ಮೂರು ಜನ ಸ್ನೇಹಿತರ ಜೊತೆ ಸಂಪರ್ಕ ಬೆಳೆಸುವಂತೆ ಸುಧೀರ್ ಒತ್ತಾಯ ಮಾಡ್ತಿದ್ದಾರೆಂದು ಶ್ರೇಯಾ ದೂರು ನೀಡಿದ್ದಾರೆ. ಶ್ರೇಯಾ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಧೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.