ಕಾರವಾರ : ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಸಮುದ್ರ ತೀರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್.ನಾರಾಯಣ, ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವಾಸಕ್ಕೆ ಆಗಮಿಸಿದ್ದ ಉಳಿದ ವಿದ್ಯಾರ್ಥಿಗಳನ್ನು ಕೋಲಾರದ ಮುಳುಬಾಗಿಲಿಗೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 57 ಮಂದಿ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಮಂಗಳವಾರ ಸಂಜೆ ಮುರ್ಡೇಶ್ವರ ಕಡಲ ತೀರದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ಏಕಾಏಕಿ 7 ವಿದ್ಯಾರ್ಥಿನಿಯರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದರು. ಈ ಪೈಕಿ ಮೂವರು ವಿದ್ಯಾರ್ಥಿನಿಯರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಿಸಿದ್ದರು. ಇನ್ನುಳಿದ ನಾಲ್ವರು ವಿದ್ಯಾರ್ಥಿನಿಯ ಪೈಕಿ ಒಬ್ಬಾಕೆ ಮೃತದೇಹ ಮಂಗಳವಾರವೇ ಪತ್ತೆಯಾಗಿದ್ದು, ಉಳಿದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು.