ಗ್ರಾಹಕರು ವಸ್ತು ಖರೀದಿಸುವ ಮುನ್ನ ಗುಣಮಟ್ಟ ತಿಳಿದಿರಬೇಕು: ಸತ್ರ ನ್ಯಾಯಾಧೀಶ ರೋಣ ವಾಸುದೇವ್

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ನಾವು ಯಾವುದೇ ವಸ್ತು ಖರೀದಿಸುವ ಮುನ್ನ ಅದರ ಗುಣಮಟ್ಟ, ಯೋಗ್ಯದ ದರದ ಕುರಿತು ಅರಿತು, ಮೋಸ ಹೋಗದಂತೆ ಗ್ರಾಹಕರು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಸರಸ್ವತಿ ಕಾನೂನು ಕಾಲೇಜು, ಎಸ್.ಜೆ.ಎಂ ಕಾನೂನು ಕಾಲೇಜು, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಗ್ರಾಹಕರ ನ್ಯಾಯಕ್ಕಾಗಿ ವರ್ಚುವಲ್ ವಿಚಾರಣೆಗಳು ಮತ್ತು ಡಿಜಿಟಲ್ ಹಾದಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಗ್ರಾಹಕರ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯವೂ ನಾವು ಏನಾದರೊಂದು ವಸ್ತು ಖರೀದಿ ಹಾಗೂ ಬಳಕೆ ಮಾಡುತ್ತಿರುತ್ತೇವೆ. ನಾವು ಬಳಸುವ ವಸ್ತು ಕೊಂಡುಕೊಳ್ಳುವಾಗ ನಾವು ಕೊಟ್ಟಂತಹ ಮೌಲ್ಯಕ್ಕೆ ಅನುಗುಣವಾಗಿ ಗುಣಮಟ್ಟ ಖಾತ್ರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು ಗ್ರಾಹಕರ ಕೆಲಸವಾಗಿದೆ ಎಂದು ಹೇಳಿದರು.

ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ವಸ್ತುವನ್ನು ಕೊಂಡಾಗ, ಸೇವೆ ಪಡೆಯುವಾಗ ಮೋಸವಾಗಬಾರದು. ಈ ನಿಟ್ಟಿನಲ್ಲಿ ಗ್ರಾಹಕರು ತಮಗೆ ಆದ ಅನ್ಯಾಯದ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬಳಸಿಕೊಂಡು ತಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದಾಗಿದೆ. ನಾವು ನಮ್ಮ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ 4 ಅಧ್ಯಾಯಗಳು ಹಾಗೂ 31 ಕಲಂಗಳು ಮಾತ್ರ ಇದ್ದವು. ಈಗ 2019ರ ಕಾಯ್ದೆಯಲ್ಲಿ 8 ಅಧ್ಯಾಯಗಳು ಹಾಗೂ 107 ಕಲಂಗಳಿಗೆ ವಿಸ್ತರಿಸಲಾಗಿದೆ. 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆ ಬೇಕಿತ್ತು. ಹಾಗಾಗಿ 2019ರಲ್ಲಿ ಹೊಸ ಕಾನೂನು ಅಳವಡಿಸಿಕೊಳ್ಳುವ ಮೂಲಕ ಅಮೂಲಾಗ್ರ ಬದಲಾವಣೆ ಮಾಡಲಾಯಿತು. ಕಳೆದ ಎರಡು-ಮೂರು ದಶಕದಲ್ಲಿ ನಮ್ಮ ಜೀವನಮಟ್ಟದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಾವು ಮೊದಲಿಗಿಂತಲೂ ಹೆಚ್ಚು ಜಾಗೃತರಾಗಿದ್ದೇವೆ ಎಂದು ಹೇಳಿದರು

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ದಿನನಿತ್ಯವೂ ಒಂದಲ್ಲ ಒಂದು ವಸ್ತು ಖರೀದಿ ಮಾಡುತ್ತಿರುತ್ತೇವೆ. ಪ್ರತಿಯೊಂದು ವಸ್ತುವಿನ ಖರೀದಿ ಹಿಂದೆ ದುಡಿಮೆಯ ಶ್ರಮ ಇರುತ್ತದೆ. ಈ ಹಿನ್ನಲೆಯಲ್ಲಿ ಯಾವುದೇ ವಸ್ತುವಿನ ಮೌಲ್ಯ ಹಾಗೂ ಗುಣಮಟ್ಟ ಅರಿಯುವುದು ಬಹಳ ಮುಖ್ಯ ಎಂದು ಹೇಳಿದರು.

ಉತ್ಪಾದಕರು ಇಲ್ಲವೆ ಮಾರಾಟಗಾರರಿಂದ ಅನ್ಯಾಯವಾದಾಗ ಗ್ರಾಹಕರ ಪರಿಹಾರ ವೇದಿಕೆಗಳಲ್ಲಿ ವ್ಯಾಜ್ಯ ಹೂಡಿ ಪರಿಹಾರ ಪಡೆದುಕೊಳ್ಳಬೇಕು. ಇದರಿಂದ ಜನರಿಗೆ ಹೆಚ್ಚಿನ ಜಾಗೃತಿ ಮೂಡಲಿದೆ. ಹಾಗಾಗಿ ನಾವು ಗ್ರಾಹಕರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ,ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಅವರು “ಗ್ರಾಹಕರ ಸಂರಕ್ಷಣಾ ಕಾಯ್ದೆ” ವಿಷಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಅನಿಲ್ ಕುಮಾರ್,  ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಎಂ.ಹೆಚ್.ಸುಧಾದೇವಿ, ಎಸ್.ಜೆ.ಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ದಿನೇಶ್, ಕಾನೂನು ಮಾಪನಾಶಾಸ್ತ್ರ ಸಹಾಯಕ ನಿಯಂತ್ರಕ ವೆಂಕಟೇಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ಆಹಾರ ನಿರೀಕ್ಷಕರು, ಆಹಾರ ಶಿರಸ್ತೆದಾರರು, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon