ವಯನಾಡು : ಕೇರಳದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ, ಕಿವಿಯೋಲೆ ಪತ್ತೆಯಾಗಿದೆ.
ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು.ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿ ಗುರುತಿಸಿ ಬೆನ್ನಟ್ಟಿದ್ದರು.
ಆಗ ತಪ್ಪಿಸಿಕೊಂಡಿದ್ದ ಹುಲಿ ನಂತರ ಪಿಲಕಾವು ಎಂಬ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಹುಲಿಯ ಕುತ್ತಿಗೆಯಲ್ಲಿ ಆಳವಾದ ಗಾಯಗಳು ಪತ್ತೆಯಾಗಿದ್ದು ಅದು ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.ಮತ್ತೊಂದು ಹುಲಿಯೊಂದಿಗೆ ಕಾದಾಟದ ಸಂದರ್ಭದಲ್ಲಿ ಈ ಗಾಯಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ.
ಶನಿವಾರ ಪಂಚರಕೋಲಿ ಪ್ರದೇಶದಲ್ಲಿ ರಾಧಾ ಎಂಬ ಮಹಿಳೆಯನ್ನು ಕೊಂದಿದ್ದು ಇದೇ ಹುಲಿ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯೊಳಗೆ ಮಹಿಳೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಪತ್ತೆಯಾಗಿವೆ.ಮಹಿಳೆ ಹುಲಿಗೆ ಬಲಿಯಾದ ಘಟನೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಹುಲಿಯನ್ನು ನರಭಕ್ಷಕ ಎಂದು ಘೋಷಿಸಲು ಮತ್ತು ಅದನ್ನು ಕೊಲ್ಲಲು ಆದೇಶಿಸುವಂತೆ ಜನ ಒತ್ತಾಯಿಸಿದ್ದರು.
ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ವಯನಾಡು ಜಿಲ್ಲೆಯಲ್ಲಿ ಹುಲಿ ಗದ್ದಲ ಮೂರು ದಿನದಿಂದ ಜೋರಾಗಿತ್ತು. ನಾಗರಹೊಳೆ, ಬಂಡೀಪುರ, ಕೇರಳದ ವಯನಾಡು ಹಾಗೂ ತಮಿಳುನಾಡಿನ ಮದುಮಲೈ ಹುಲಿಧಾಮಗಳಿಗೆ ಹೊಂದಿಕೊಂಡಂತೆ ವಯನಾಡು ಇರುವುದರಿಂದ ಈ ಪ್ರದೇಶಗಳಲ್ಲಿ ಹುಲಿ ಸಂಖ್ಯೆ ಹೆಚ್ಚಿದೆ.