ನವದೆಹಲಿ: ಪತ್ರಕರ್ತೆ ರಾಣಾ ಅಯೂಬ್ ವಿರುದ್ಧ ಪ್ರಕರಣ ದಾಖಲಿಸಲು ದೆಹಲಿ ಕೋರ್ಟ್ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ವಿರೋಧಿ ಭಾವನೆಗಳನ್ನು ಕೆರಳಿಸಿದ ದೂರಿನ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.
ವಕೀಲರಾದ ಅಮಿತಾ ಸಚ್ದೇವ್ ಅವರು ದೂರು ದಾಖಲಿಸಿದ್ದಾರೆ. ರಾಣಾ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ರಾಣಾ ಅವರು ಹಿಂದೂ ದೇವರನ್ನು ಅವಮಾನಿಸಿದ್ದಾರೆ ಮತ್ತು ಎಕ್ಸ್ ಪೋಸ್ಟ್ ಮೂಲಕ ಭಾರತ ವಿರೋಧಿ ಪ್ರಚಾರವನ್ನು ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ರಮಣ್ ಸಿಂಗ್ ಅವರು ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದು, ಎರಡು ಗುಂಪುಗಳ ನಡುವೆ ಪೈಪೋಟಿಗೆ ಪ್ರಚೋದನೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದಿದ್ದಾರೆ. ಆರೋಪದ ಗಂಭೀರತೆಯನ್ನು ಪರಿಗಣಿಸಿ ತ್ವರಿತ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.