ನವದೆಹಲಿ : ಇದೇ ಜೂನ್ 19ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಬೇಕಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಯಾನ ಮತ್ತೆ ಮುಂದೂಡಿಕೆಯಾಗಿದೆ. ಜೂನ್ 22ರಂದು ಸಂಭಾವ್ಯ ಉಡಾವಣಾ ದಿನಾಂಕ ಪ್ರಕಟಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಸ್ಪೇಸ್ಎಕ್ಸ್ ನ ಫಾಲ್ಕನ್ 9 ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಬಾಹ್ಯಾಕಾಶ ಯಾನ ಮುಂದೂಡಿಕೆಯಾಗಿದೆ. ಕಳೆದ ವಾರ ಉಡಾವಣಾ ಪ್ಯಾಡ್ನಲ್ಲಿ ಏಳು ಸೆಕೆಂಡುಗಳ ಬಿಸಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ಸಮಯದಲ್ಲಿ ಪ್ರೊಪಲ್ಷನ್ ಬೇಯಲ್ಲಿ LOX ಸೋರಿಕೆಯಾಗಿತ್ತು. ಈ ಕುರಿತು ಇಸ್ರೋ ತಂಡ ‘ಆ್ಯಕ್ಸಿಯಂ-4’ ಮತ್ತು ಸ್ಪೇಸ್ ಎಕ್ಸ್ ನ ತಜ್ಞರೊಂದಿಗೆ ಚರ್ಚೆ ನಡೆಸಿ, ಸೋರಿಕೆ ಸರಿಪಡಿಸಲು ಮತ್ತು ಉಡಾವಣೆಗೆ ತೆರವುಗೊಳಿಸುವ ಮೊದಲು ಅಗತ್ಯ ಮೌಲ್ಯೀಕರಣ ಪರೀಕ್ಷೆ ನಡೆಸಲು ನಿರ್ಧರಿಸಿತ್ತು.
ಈ ಎಲ್ಲ ಪ್ರಕ್ರಿಯೆ ಮುಕ್ತಾಯದ ಬಳಿಕ ಜೂನ್ 19ರಂದು ಮಿಷನ್ ಶುರು ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ದೋಷ ಸರಿಪಡಿಸುವ ಪ್ರಕ್ರಿಯೆ ಈವರೆಗೆ ಪೂರ್ಣಗೊಳ್ಳದ ಕಾರಣ ಜೂನ್ 22ಕ್ಕೆ ಮುನ್ನ ‘ಆ್ಯಕ್ಸಿಯಂ-4′ ಉಡಾವಣೆ ಮಾಡಲು ಸಾಧ್ಯವಾಗಿಲ್ಲ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಜೂನ್ 22ಕ್ಕೂ ಮುನ್ನ ಆ್ಯಕ್ಸಿಯಂ-4’ ಅನ್ನು ಉಡಾವಣೆ ಮಾಡುವ ಗುರಿಯನ್ನು ನಾಸಾ, ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್ಎಕ್ಸ್ ಹೊಂದಿಲ್ಲ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜ್ವೆಜ್ಡಾ ಸೇವಾ ಮಾಡ್ಯೂಲ್ನಲ್ಲಿನ ದುರಸ್ತಿ ಕಾರ್ಯ, ಆರೋಹಣ ಕಾರಿಡಾರ್ ಹವಾಮಾನ ಪರಿಸ್ಥಿತಿ, ಕ್ವಾರಂಟೈನ್ನಲ್ಲಿರುವ ಸಿಬ್ಬಂದಿಯ ಆರೋಗ್ಯ ಮತ್ತು ಸನ್ನದ್ಧತೆ ಎಲ್ಲವನ್ನು ಪರಿಶೀಲಿಸಿದ ಬಳಿಕ ಜೂನ್ 22ರಂದು ಸಂಭಾವ್ಯ ಉಡಾವಣಾ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದೆ.