ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಪಾಲಿಗೆ ನಾಳೆ (ಶುಕ್ರವಾರ) ಅತ್ಯಂತ ನಿರ್ಣಾಯಕ ದಿನ. ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ನಿರ್ಣಾಯಕ ದಿನವಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯು ನಾಳೆ ನಡೆಯಲಿದ್ದು, ಪ್ರಕರಣದ ಮುಂದಿನ ಹಂತದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.
ಹೈಕೋರ್ಟ್‌ನಲ್ಲಿ ಹಿನ್ನಡೆಯಾದ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್ ಅವರ ಜಾಮೀನು ಅರ್ಜಿಯ ಭವಿಷ್ಯ, ಕೆಳಹಂತದ ನ್ಯಾಯಾಲಯ ನೀಡಲಿರುವ ‘ಪ್ರಗತಿ ವರದಿ’ಯ ಮೇಲೆ ನಿಂತಿದೆ. ಸಾಕ್ಷಿಗಳ ವಿಚಾರಣೆ ಎಷ್ಟು ಮುಗಿದಿದೆ ಮತ್ತು ಜೈಲಿನಲ್ಲಿ ದರ್ಶನ್ ಅವರಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದ್ದು, ಇದು ದರ್ಶನ್ ಅವರ ಬಿಡುಗಡೆಯ ಹಾದಿಯನ್ನು ಸುಗಮಗೊಳಿಸುತ್ತದೆಯೇ ಅಥವಾ ಕಠಿಣಗೊಳಿಸುತ್ತದೆಯೇ ಎಂಬ ಕುತೂಹಲ ಮನೆಮಾಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ನೋಯಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ಈ ವಿಚಾರಣೆ ನಡೆಯಲಿದೆ.ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬೆಂಗಳೂರಿನ 57ನೇ ಸಿಸಿಎಚ್ (CCH) ನ್ಯಾಯಾಲಯದಿಂದ ಪ್ರಕರಣದ ಪ್ರಗತಿ ವರದಿಯನ್ನು ಕೇಳಿತ್ತು. ಅದರಲ್ಲಿ ಎಷ್ಟು ಸಾಕ್ಷಿಗಳ ವಿಚಾರಣೆ ಮುಕ್ತಾಯಗೊಂಡಿದೆ, ಎಷ್ಟು ಬಾಕಿ ಇವೆ ಮತ್ತು ಇಡೀ ಪ್ರಕ್ರಿಯೆ ಮುಗಿಯಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.

































