ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕು ಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ ಸ್ಥಾಪಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಬಿ.ದುರ್ಗ ಹೋಬಳಿಗೆ ಸೇರಿದ ಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಲಂಬಾಣಿ ಜನಾಂಗದವರೆ ಅಧಿಕವಾಗಿದ್ದು, ನೂರರಿಂದ 120 ಮನೆಗಳಿದ್ದು, ಐದುನೂರರಿಂದ 800 ರಷ್ಟು ಜನಸಂಖ್ಯೆಯಿದೆ. ತಾಂಡದಲ್ಲಿ ಪ್ರಾಥಮಿಕ ಶಾಲೆಯಿರುವುದರಿಂದ ಮಜುರೆ ಗ್ರಾಮವಾಗಿ ಪರಿಗಣಿಸಲಾಗಿದ್ದು, ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಗಂಜಿಗಟ್ಟೆ ಲಂಬಾಣಿ ತಾಂಡವನ್ನು ಕಂದಾಯ ಗ್ರಾಮವಾಗಿ ಪರಿಗಣಿಸಿ ಪ್ರತ್ಯೇಕ ಮತದಾನದ ಬೂತ್ ಸ್ಥಾಪಿಸುವಂತೆ ಒತ್ತಾಯಿಸಿದರು.
ಗಂಜಿಗಟ್ಟೆ ಲಂಬಾಣಿಹಟ್ಟಿ ಕುಗ್ರಾಮವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಈ ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾಗರೀಕ ಮೂಲಭೂತ ಸೌಲಭ್ಯಗಳಿಂದ ದೂರ ಉಳಿದಿರುವ ಲಂಬಾಣಿಹಟ್ಟಿ ಗಣಿಬಾಧಿತ ಪ್ರದೇಶವಾಗಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಪ್ರತ್ಯೇಕ ಮತದಾನದ ಬೂತ್ ಸ್ಥಾಪಿಸಿ ಗಣಿಬಾಧಿತ ಪ್ರದೇಶಕ್ಕೆ ಒಳಪಡಿಸುವಂತೆ ಗಣಿಬಾಧಿತ ಸಮಿತಿ ಸಂಸ್ಥಾಪಕ ರಮೇಶ್ ಬಿ.ದುರ್ಗ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ರಮೇಶ್ನಾಯ್ಕ, ಗೋವರ್ಧನ್, ವೆಂಕಟೇಶ್, ಜಿ.ಸಿ.ತಿಪ್ಪೇಸ್ವಾಮಿ, ರಘು, ಉಮೇಶ್, ಶಿವನಾಯ್ಕ, ಯೋಗೇಶ್, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ಕುಮಾರ್, ತಿಪ್ಪೇಸ್ವಾಮಿ, ಶಿವಕುಮಾರ್, ಕೃಷ್ಣನಾಯ್ಕ, ಮಂಜುಳಬಾಯಿ, ಕರಿಬಸವ ಇನ್ನು ಅನೇಕರು ಪ್ರತಿಭಟನೆಯಲ್ಲಿದ್ದರು.
































