ಚಿತ್ರದುರ್ಗ : ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘುರವರ ಅಭಿಮಾನಿಗಳು ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಜೈಕಾರ ಕೂಗಿದರು.ಪಿ.ರಘು ಫೋಟೋಗಳುಳ್ಳ ಪೋಸ್ಟರ್ಗಳನ್ನು ಎತಿಹಿಡಿದು ಘೋಷಣೆಗಳನ್ನು ಕೂಗುತ್ತಿದ್ದ ಅಭಿಮಾನಿಗಳು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಾರಥ್ಯದಲ್ಲಿ ಮುನ್ನಡೆಯುವ ಸರ್ಕಾರ ಅಭಿವೃದ್ದಿಯತ್ತ ಸಾಗಲಿ ಎಂದು ಹಾರೈಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲಪ್ರದೇಶ, ಕೇರಳ, ತೆಲಂಗಾಣ ಮುಖ್ಯಮಂತ್ರಿಗಳು, ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಟರು ಸೇರಿದಂತೆ ಅನೇಕ ಗಣ್ಯರು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕ್ಯಾಬಿನೆಟ್ ದರ್ಜೆ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಅಭಿನಂದಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಸಾಧಿಕ್ ಫೈಲ್ವಾನ್, ಅಣ್ಣಿ, ಕೋಟಿ, ಲೋಕೇಶ್, ಕೆ.ರಾಜಣ್ಣ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ್ಬಳ್ಳೆಕಟ್ಟೆ, ಸತೀಶ್ ಜೆಜೆಹಟ್ಟಿ, ಎಂ.ಕೆ.ಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್, ಸುನಿಲ್ಕುಮಾರ್, ಪ್ರಕಾಶ್ ಭರಮಸಾಗರ ಇನ್ನು ಅನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.






























