ಚಿತ್ರದುರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿನ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ವಿವಿಧ ಸೌಲಭ್ಯಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ಅರೆಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಗಳಿಗಾಗಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವೆಬ್ಸೈಟ್ https://ssp.postmatric.karnataka.gov.in/ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಇಲಾಖೆಯ ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ https://bcwd.karnataka.gov.in ಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅಥವಾ ಇಮೇಲ್ [email protected] ಮೂಲಕ ಸಂಪರ್ಕಿಸಬಹುದು. ತಾಂತ್ರಿಕ ನೆರವಿಗಾಗಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಸಂಖ್ಯೆ 1902 ಅಥವಾ ಇಮೇಲ್ [email protected] ಅನ್ನು ಸಂಪರ್ಕಿಸಲು ಕೋರಲಾಗಿದೆ. ಅರ್ಹ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
































