ಬೆಂಗಳೂರು: ರಾಜ್ಯದಲ್ಲಿ ಒಂದು ತಿಂಗಳ ನಂತರ ಮುಂಗಾರು ಚುರುಕಾಗಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರ ಭರ್ತಿಯಾಗುತ್ತಿದ್ದ ಗಾಜನೂರು ತುಂಗಾ ಜಲಾಶಯ ಜುಲೈ ಮೊದಲ ವಾರ ಸಂಪೂರ್ಣ ಭರ್ತಿಯಾಗಿದೆ.
ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಗಾಜನೂರು ಸಮೀಪದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಜಲಾಶಯದ ಗರಿಷ್ಠ ಮಟ್ಟ 588.24 ಮೀ. ಆಗಿದ್ದು ಪ್ರಸ್ತುತ ನೀರಿನ ಮಟ್ಟ 588.21 ಮೀಟರ್ ಗೆ ತಲುಪಿದೆ. 20 ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ಮುಂಗಾರಿನಲ್ಲಿ ಜಲಾಶಯವೊಂದು ರಾಜ್ಯದಲ್ಲಿ ಭರ್ತಿಯಾಗಿರುವುದು ಇದೇ ಮೊದಲು.
ಶಿವಮೊಗ್ಗ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಭಾರಿ ಏರಿಕೆಯಾಗಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಯುತ್ತಿದೆ.

































