ಚಿತ್ರದುರ್ಗ: ತೋಟಗಾರಿಕೆ ಇಲಾಖೆಯಿಂದ ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನುಕೃಷಿಕರ ಆರ್ಥಿಕಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ಝೇಂಕಾರ/Jhenkara ಎಂಬ ಬ್ರ್ಯಾಂಡ್, ಟ್ಯಾಗ್ಲೈನ್, ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದೆ.
ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ತೋಟಗಾರಿಕೆ ಇಲಾಖೆಯ ಮಾಲೀಕತ್ವದ ಈ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಳಸಿಕೊಂಡು ಜೇನುತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಜೇನುಕೃಷಿಕರು ಮತ್ತು ಸಂಗ್ರಾಹಕರಲ್ಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಅವರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.