ಮಂಗಳೂರು: ಒಂದೇ ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ್ದ ಪುಟ್ಟ ಬಾಲಕಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಗರದ ಕೊಟ್ಟಾರದ ದ್ವಾರಕಾ ನಗರದ ಶ್ರೀಕೃಷ್ಣಜ್ಞಾನೋದಯ ಮಂದಿರ ಬಳಿಯ ನಿವಾಸಿ ಪುಷ್ಪರಾಜ್ ಎಸ್. ಕುಂದರ್ ಹಾಗೂ ವೈಶಾಲಿ ಎಸ್. ಬೆಂಗ್ರೆಯವರ ಪುತ್ರಿಯಾದ ಪೂರ್ವಿ ಕೆಲ ಕಾಲಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು.
ಆದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ರವಿವಾರ ಬೆಳಗ್ಗೆ 7.30ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಸಣ್ಣ ವಯಸ್ಸಿನಲ್ಲಿ ಚುರುಕಿನ ಬಾಲಕಿಯಾಗಿದ್ದ ಪೂರ್ವಿ ಫುಟ್‌ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಳು.
ಈಕೆ ತನ್ನ ವಿಶೇಷ ಆಸಕ್ತಿಯಿಂದ ವಿವಿಧ ಸಂಘ ಸಂಸ್ಥೆಗಳಿಂದ ಸಮ್ಮಾನ ಪಡೆದುಕೊಂಡಿದ್ದಳು. ಬೆಂಗಳೂರಿನಲ್ಲಿ ತಂದೆ-ತಾಯಿಯೊಂದಿಗಿದ್ದ ಪೂರ್ವಿ ಗ್ರೀನ್ ವುಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಅನಾರೋಗ್ಯಕ್ಕೀಡಾದಾಗ ಮಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು.



























