ಹೈದರಾಬಾದ್ :ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಎಲ್ಲಾ ಸಮಯದಲ್ಲೂ ಗೆಲುವು ಸಿಕ್ಕಿಲ್ಲ. ನಾನು ನನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಸೌತ್ ಬ್ಯೂಟಿ ಸಮಂತಾ ಹೇಳಿದ್ದಾರೆ. ಇದರ ಜೊತೆಗೆ ಕೊನೆಯ ಕೆಲವು ಸಿನಿಮಾಗಳು ಅಂದುಕೊಂಡಂತೆ ಮೂಡುಬಂದಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ಸೌತ್ ಬ್ಯೂಟಿ ಸಮಂತಾ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಈ ವೇಳೆ ಅವರಿಗೆ ‘ಸಿಟಾಡೆಲ್: ಹನಿ ಬನಿ’ ಚಿತ್ರಕ್ಕೆ ಎಷ್ಟು ಎಫರ್ಟ್ ಹಾಕಿದ್ದೀರಿ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇದಕ್ಕೆ ಸಮಂತಾ ಅವರು ಉತ್ತರ ನೀಡಿದ್ದು, ‘ಪ್ರತಿಯೊಂದು ಪಾತ್ರವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಬೇಕು ಎಂದು ನಾನು ನನಗೆ ಪ್ರಾಮಿಸ್ ಮಾಡಿಕೊಂಡಿದ್ದೇನೆ. ಪ್ರತಿಯೊಂದು ಸವಾಲು ಹೆಚ್ಚು ಕಷ್ಟಕರವಾಗಿದೆ’ ಎಂದು ಅವರು ಹೇಳಿದ್ದಾರೆ. ಈ ಸೀರಿಸ್ನಲ್ಲಿ ಸಮಂತಾ ಭರ್ಜರಿ ಆ್ಯಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಮಂತಾ ಅವರು ‘ಖುಷಿ’ ಬಳಿಕ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಅವರಿಗೆ ಕಾಡಿದ ಅನಾರೋಗ್ಯದಿಂದಾಗಿ ಅವರು ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದರ ನಡುವೆ ಕೌಟುಂಬಿಕ ವಿಚಾರದಲ್ಲಿಯೂ ಸಮಂತಾ ಸಾಕಷ್ಟು ಸುದ್ದಿಯಾಗಿದ್ದರು. ಸದ್ಯ ಇದೀಗ ಎಲ್ಲದರ ನಂತರ ಒಂದು ಬಿಗ್ ಅಪ್‌ಡೇಟ್‌ನೊಂದಿಗೆ ಮರಳಿದ್ದಾರೆ.