ಮೈಸೂರು: ವೈದ್ಯರ ನಿರ್ಲಕ್ಷದಿಂದಾಗಿ ರೋಗಿಗಳು, ನವಜಾತ ಶಿಶು, ಬಾಣಂತಿಯರ ಸಾವು ಆರೋಪಗಳು ಕೇಳಿಬರುತ್ತಿವೆ. ಇದೀಗ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಇರುವೆ ಕಚ್ಚ್ಜಿ ಐಸಿಯುನಲ್ಲಿದ್ದ ನವಜಾತ ಶಿಶು ಮೃತಪಟ್ಟಿರುವ ಘಟನೆ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷದಿಂದಾಗಿಯೇ ಶಿಶುವಿಗೆ ಇರುವೆ ಕಚ್ಚಿ ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಅವಧಿ ಪೂರ್ವ ಗಂಡು ಮಗುವೊಂದು ಏಪ್ರಿಲ್ 15ರಂದು ಹುಟ್ಟಿತ್ತು. ಕೇವಲ 7 ತಿಂಗಳಿಗೆ ಮಗು ಜನಿಸಿದ್ದು, ಮಗು 1 ಕೆಜಿ 40 ಗ್ರಾಂ ಮಾತ್ರ ತೂಕ ಹೊಂದಿತ್ತು. ಈ ಹಿನ್ನೆಲೆ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಇರುವೆ ಕಚ್ಚಿರುವ ಆರೋಪ ಕೇಳಿಬಂದಿದೆ.
ಐಸಿಯುನಲ್ಲಿ ಇರುವೆಗಳಿತ್ತು. ಇಲ್ಲಿ ತುಂಬಾ ಇರುವೆಗಳಿವೆ ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಈ ಮೊದಲೇ ಶಿಶುವಿನ ಪೋಷಕರು ತಿಳಿಸಿದ್ದರಂತೆ ಆದರೆ ಸಿಹಿ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿವೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದರಂತೆ ಆದರೆ ಈಗ ಮಗು ಇರುವೆ ಕಚ್ಚಿ ಸಾವನ್ನಪ್ಪಿದೆ ಎಂದು ಶಿಶುವಿನ ಪೋಷಕರು ಆರೋಪಿಸಿದ್ದಾರೆ.
































